ಪ್ರಧಾನ ಸುದ್ದಿ

೨೦ ಲಕ್ಷ ನಗದು ಮತ್ತು ಉದ್ಯೋಗ ನಿರಾಕರಿಸಿದ ಪಂಜಾಬ್ ರೇಪ್ ಸಂತ್ರಸ್ತೆಯ ಕುಟುಂಬ

Guruprasad Narayana

ಚಂಡೀಗರ್: ರೇಪ್ ಗೆ ಒಳಗಾಗಿ, ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆಸೆದಿದ್ದರಿಂದ ಮೃತಪಟ್ಟ ೧೩ ವರ್ಷದ ಬಾಲಕಿಯ ಕುಟುಂಬ ವರ್ಗ, ಆರ್ಬಿಟ್ ಸಾರಿಗೆ ಸಂಸ್ಥೆಯ ಪರವಾನಗಿ ರದ್ದು ಮಾಡಿ ಕುಟುಂಬಕ್ಕೆ ಪರಿಹಾರ ನೀಡುವವರೆಗೆ ಬಾಲಕಿಯ ಶವಸಂಸ್ಕಾರ ಮಾಡುವುದಿಲ್ಲ ಎಂದು ಶುಕ್ರವಾರ ತಿಳಿಸಿದೆ. ಆರ್ಬಿಟ್ ಸಾರಿಗೆ ಸಂಸ್ಥೆಯಲ್ಲಿ ಪಂಜಾಬಿನ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಹೆಚ್ಚಿನ ಪಾಲು ಹೊಂದಿದ್ದಾರೆ.

ಈ ಮಧ್ಯೆ ಬಲ್ಲ ಮೂಲಗಳ ಪ್ರಕಾರ ಈ ಪ್ರಕರಣವನ್ನು ವಿಷೇಶ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಹಾಗೂ ರಾಜ್ಯ ಸರ್ಕಾರ ಸಂತ್ರಸ್ತಳ ಕುಟುಂಬಕ್ಕೆ ೨೦ ಲಕ್ಷ ನೀಡಿ, ಕುಟುಂಬ ವರ್ಗದ ಒಬ್ಬರಿಗೆ ಉದ್ಯೋಗ ನೀಡಲಾಗುವುದಾಗಿ ತಿಳಿಸಿದೆ ಎನ್ನಲಾಗಿದೆ.

ಆದರೆ ಆರ್ಬಿಟ್ ಸಂಸ್ಥೆಯ ಪರವಾನಗಿ ರದ್ದುಪಡಿಸುವವರೆಗೂ ಪರಿಹಾರ ಮುಟ್ಟುವುದಿಲ್ಲ ಎಂದು ಕುಟುಂಬ ಪ್ರತಿಭಟಿಸಿದೆ.

"ಈ ಘಟನೆಯಿಂದ ನನಗೆ ವೈಯಕ್ತಿಕವಾಗಿ ಆಳವಾದ ನೋವಾಗಿದೆ" ಎಂದಿರುವ ಸುಖ್ಬೀರ್ ಸಿಂಗ್ ಬಾದಲ್, ಸಂಸ್ಥೆಯ ಮಾಲೀಕತ್ವದ ಬಗ್ಗೆ ಉಲ್ಲೇಖಿಸಿ "ಇಂತಹ ದುರ್ಘಟನೆಯ ತಪ್ಪಿತಸ್ಥರಿಗೆ ಶಿಕ್ಷೆಯಾಗದಂತೆ ಸಂಸ್ಥೆಯ ಮಾಲಿಕತ್ವ ತಡೆಯುತ್ತದೆ ಎಂಬುದು ಅಸಂಬಂದ್ಧ" ಎಂದಿದ್ದಾರೆ.

"ನಮ್ಮೆಲ್ಲ ಬೇಡಿಕೆಗಳನ್ನು ಅವರು ಒಪ್ಪುವವರೆಗೂ ನನ್ನ ಮಗುವಿನ ಅಂತ್ಯಸಂಸ್ಕಾರ ಮಾಡುವುದಿಲ್ಲ. ನನ್ನ ಪತ್ನಿ ಮತ್ತು ಮಗಳಿಗೆ ಲೈಂಗಿಕ ಕಿರುಕುಳ ನೀಡಿ ಹೊರಗೆಸೆದ ಬಸ್ಸಿನ ಮಾಲಿಕತ್ವದ ಸಂಸ್ಥೆ ಆರ್ಬಿಟ್ ನ ಪರವಾನಗಿಯನ್ನು ರದ್ದುಮಾಡುವುದು ನಮ್ಮ ಮೊದಲ ಬೇಡಿಕೆ" ಎಂದು ಮೃತಪಟ್ಟ ಬಾಲಕಿಯ ತಂದೆ ಸುಖದೇವ್ ಸಿಂಗ್ ತಿಳಿಸಿದ್ದಾರೆ.

"ನಮ್ಮ ಎರಡನೆ ಬೇಡಿಕೆ ಕುಟುಂಬಕ್ಕೆ ೫೦ ಲಕ್ಷ ಪರಿಹಾರ ಧನ ನೀಡಬೇಕು ಎಂಬುದು ಹಾಗೂ ಮೂರನೆಯದು ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಿ ನನ್ನ ಪತ್ನಿಗೆ ಉಚಿತ ಚಿಕಿತ್ಸೆ ನೀಡಬೇಕೆಂಬುದು" ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಈಗ ಬಾಲಕಿಯ ಮೃತದೇಹವನ್ನು ಇರಿಸಲಾಗಿದೆ.

SCROLL FOR NEXT