ಪ್ರಧಾನ ಸುದ್ದಿ

ಗ್ರಾಪಂ ಚುನಾವಣೆ ದಿನಾಂಕ ಪ್ರಕಟ, ಮೇ 29, ಜೂನ್ 2ರಂದು ಮತದಾನ

Lingaraj Badiger

ಬೆಂಗಳೂರು: ರಾಜ್ಯ ಚುನಾವಣಾ ಆಯೋಗ ಮಂಗಳವಾರ ಗ್ರಾಮ ಪಂಚಾಯತ್ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು, ರಾಜ್ಯದ 5844 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.

ಈ ಸಂಬಂಧ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ಅವರು, ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಮೇ 11ರಂದು ಅಧಿಸೂಚನೆ ಹೊರಡಿಸಲಾಗುವುದು ಮತ್ತು ಮೇ 10ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದರು.

ಮೇ 18 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೇ 19 ನಾಮಪತ್ರ ಪರಿಶೀಲನೆ ಹಾಗೂ ನಾಮಪತ್ರ ಹಿಂಪಡೆಯಲು ಮೇ 21 ಕೊನೆಯ ದಿನವಾಗಿದೆ ಎಂದು ಅವರು ಹೇಳಿದರು

ಮೊದಲ ಹಂತದಲ್ಲಿ ಮೈಸೂರು, ಚಿಕ್ಕಮಗಳೂರು, ಕೊಡಗು, ಮಂಡ್ಯ, ಉಡುಪಿ, ಹಾಸನ, ದಕ್ಷಿಣ ಕನ್ನಡ, ಹಾವೇರಿ, ಗದಗ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಧಾರವಾಡ ಹಾಗೂ ಚಾಮರಾಜನಗರದಲ್ಲಿ ಚುನಾವಣೆ ನಡೆಯಲಿದೆ.

ಇನ್ನು ಎರಡನೇ ಹಂತದ ಚುನಾವಣೆಗೆ ಮೇ 15ಕ್ಕೆ ಅಧಿಸೂಚನೆ ಪ್ರಕಟ, ಮೇ 22 ನಾಮಪತ್ರ ಸಲ್ಲಿಕೆಗೆ ಕೊನೆ ದಿನ, ಮೇ 23 ನಾಮಪತ್ರ ಪರಿಶೀಲನೆ, ಮೇ 25 ನಾಮಪತ್ರ ಹಿಂಪಡೆಯಲು ಕೊನೆ ದಿನ, ಜೂನ್ 2 ಮತದಾನ ನಡೆಯಲಿದೆ ಎಂದು ವಿವರಿಸಿದರು.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ,  ಚಿಕ್ಕಬಳ್ಳಾಪುರ, ಕೋಲಾರ, ಶಿವಮೊಗ್ಗ, ತುಮಕೂರು,  ಬೀದರ್, ಬಳ್ಳಾರಿ, ಗುಲ್ಬರ್ಗ, ಯಾದಗಿರಿ ಹಾಗೂ ರಾಯಚೂರ ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.

SCROLL FOR NEXT