ಪ್ರಧಾನ ಸುದ್ದಿ

ಸಂಸತ್ತಿನಲ್ಲಿ ಕಪ್ಪು ಹಣ ಕಾಯ್ದೆ ಅಂಕಿತ; ತಪ್ಪಿತಸ್ಥರಿಗೆ ೧೦ ವರ್ಷದವರೆಗೂ ಜೈಲು

Guruprasad Narayana

ನವದೆಹಲಿ: ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿ ಕಾಯ್ದೆ ಇಂದು ಸಂಸತ್ತಿನಲ್ಲಿ ಮಂಜೂರಾಗಿದೆ. ಈ ಕಾಯ್ದೆಯಡಿ ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಹಣ ಶೇಖರಿಸಿಡುವವರಿಗೆ ೧೦ ವರ್ಷದವರೆಗೂ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಲೋಕಸಭೆಯಲ್ಲಿ ಈ ಕಾಯ್ದೆ ಮಂಜೂರಾದ ಎರಡು ದಿನಗಳ ನಂತರ ಇಂದು ರಾಜ್ಯಸಭೆಯಲ್ಲೂ ಕೂಡ ಅಂಗೀಕಾರವಾಗಿದೆ.

ಸಂಸತ್ತಿನ ಮೇಲ್ಮನೆಯಲ್ಲಿ ಈ ಕಪ್ಪು ಹಣ ಕಾಯ್ದೆಯನ್ನು ಮಂಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ವಿದೇಶದಲ್ಲಿ ಶೇಖರಿಸುವ ಆಸ್ತಿಗೆ ಇದೇ ಮೊದಲ ಬಾರಿಗೆ ತೆರಿಗೆ ಹಾಕಲಾಗುತ್ತಿದೆ ಎಂದಿದ್ದಾರೆ.

"ಈ ಕಾಯ್ದೆಗೂ ಪ್ರಾದೇಶಿಕ ಕಪ್ಪು ಹಣಕ್ಕೂ ಸಂಬಂಧವಿಲ್ಲ" ಎಂದು ಚರ್ಚೆಯಲ್ಲಿ ಜೇಟ್ಲಿ ಸ್ಪಷ್ಟೀಕರಣ ನೀಡಿದ್ದಾರೆ.

"ಇದೇ ಮೊದಲಬಾರಿಗೆ ಬಹಿರಂಗಪಡಿಸದ, ವಿದೇಶಿ ಆದಾಯ ಮತ್ತು ಆಸ್ತಿಗೆ ೩೦% ತೆರಿಗೆ ಹಾಕಲಾಗುತ್ತಿದೆ ಹಾಗೂ ಹೆಚ್ಚುವರಿ ೩೦% ದಂಡವನ್ನು ವಿಧಿಸಲಾಗುತ್ತದೆ" ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.

ತಮ್ಮ ಆದಾಯ ಮತ್ತು ಆಸ್ತಿಯನ್ನು ಬಹಿರಂಗಪಡಿಸಿ ಆದಾಯ ತೆರಿಗೆ ಮತ್ತು ದಂಡ ಕಟ್ಟಲು ನೀಡಿರುವ ಸಮಯವನ್ನು ಮೀರಿದರೆ ಇನ್ನೂ ಹೆಚ್ಚಿನ ದಂಡ ವಿಧಿಸಲಾಗುವುದು ಹಾಗು ಅಂತಹವರು ೩ರಿಂದ ೧೦ ವರ್ಷದ ಜೈಲು ಶಿಕ್ಷೆಗೂ ಅರ್ಹರಾಗಿರುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.

ಅನಧಿಕೃತ ಅಂದಾಜಿನ ಪ್ರಕಾರ ೧.೪ ಟ್ರಿಲಿಯನ್ ಡಾಲರ್ ಗಳಿಗೂ ಹೆಚ್ಚು ಹಣವನ್ನು ವಿದೇಶಿ ಖಾತೆಗಳಲ್ಲಿ ಇಡಲಾಗಿದೆ ಎನ್ನಲಾಗಿದೆ.

SCROLL FOR NEXT