ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹೈಕೋರ್ಟ್ ನಿಂದ ಕ್ಲೀನ್ ಚಿಟ್ ಪಡೆದಿರುವ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು 5ನೇ ಬಾರಿಗೆ ತಮಿಳುನಾಡು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ಜಯಲಲಿತಾ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜಯಲಲಿತಾ ಅವರೊಂದಿಗೆ 28 ಶಾಸಕರು ಸಂಪುಟ ಸೇರುವ ಸಾಧ್ಯತೆ ಇದ್ದು, ಮಾಜಿ ಮುಖ್ಯಮಂತ್ರಿ ಮತ್ತು ಜಯಲಲಿತಾ ಅವರ ನಂಬಿಕಸ್ಥರಲ್ಲಿ ಪ್ರಮುಖರಾಗಿರುವ ಪನ್ನೀರ್ ಸೆಲ್ವಂ ಅವರಿಗೆ ಜಯಾ ಸಂಪುಟದಲ್ಲಿ ಪ್ರಮುಖ ಹುದ್ದೆ ನೀಡುವ ಕುರಿತು ಮಾಹಿತಿ ಲಭ್ಯವಾಗಿದೆ.
ಮದ್ರಾಸ್ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ 67 ವರ್ಷದ ಜೆ.ಜಯಲಲಿತಾ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಜ್ಯಪಾಲ ಕೆ.ರೋಸಯ್ಯ ಅವರು ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಜಯಲಲಿತಾ ಪ್ರಮಾಣ ವಚನದ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಜಯಲಲಿತಾ ಅವರ ಅಭಿಮಾನಿಗಳು ಮತ್ತು ಎಐಎಡಿಎಂಕೆ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ.
ಇನ್ನು ಜಯಲಲಿತಾ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಪ್ರಮಾಣ ವಚನ ಸ್ವೀಕರಿಸಿದ 6 ತಿಂಗಳಲ್ಲಿ ಅವರು ಮತ್ತೆ ವಿಧಾನಸಭೆ ಅಥವಾ ಪರಿಷತ್ನಿಂದ ಆಯ್ಕೆಯಾಗಬೇಕಿದೆ.
2001ರಲ್ಲಿ ತಾನ್ಸಿ ಭೂ ಹಗರಣದಲ್ಲಿ ಸಿಲುಕಿ ಜಯಲಲಿತಾ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ 6 ತಿಂಗಳ ಮಟ್ಟಿಗೆ ಇದೇ ಪನ್ನೀರ್ ಸೆಲ್ವಂ ಅವರು ಮುಖ್ಯಮಂತ್ರಿಯಾಗಿದ್ದರು. ಈ ಪ್ರಕರಣದಲ್ಲಿ ಜಯಲಲಿತಾ ಅವರು ನಿರ್ದೋಷಿಯಾದ ಬಳಿಕ ಪನ್ನೀರ್ ಸೆಲ್ವಂ ಪುನಃ ಜಯಾ ಅವರಿಗೆ ಅಧಿಕಾರ ಬಿಟ್ಟುಕೊಟ್ಟಿದ್ದರು.
2014ರ ಸೆಪ್ಟೆಂಬರ್‌ನಲ್ಲಿ ಕರ್ನಾಟಕದ ವಿಶೇಷ ನ್ಯಾಯಾಲಯದಲ್ಲಿ ನಡೆದ ಅಕ್ರಮ ಆಸ್ತಿಗಳಿಗೆ ಪ್ರಕರಣದ ವಿಚಾರಣೆಯಲ್ಲಿ ಜಯಾ ವಿರುದ್ಧದ ಆರೋಪ ಸಾಬೀತಾಗಿದ್ದರಿಂದ ಮತ್ತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಆರೋಪ ಮುಕ್ತವಾದ ಬಳಿಕ ಪನ್ನೀರ್ ಸೆಲ್ವಂ ಪುನಃ ಮುಖ್ಯಮಂತ್ರಿ ಪಟ್ಟವನ್ನು ಬಿಟ್ಟುಕೊಟ್ಟಿದ್ದಾರೆ.