ನವದೆಹಲಿ: ಸಂವಿಧಾನವನ್ನು ಬದಲಾಯಿಸುವ ಅಥವಾ ಪರಾಮರ್ಶಿಸುವ ಯಾವುದೇ ಪ್ರಯತ್ನ ನಡೆದರೂ ದೇಶದಲ್ಲಿ ಗಲಾಟೆಯಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯಲ್ಲಿ ಎಚ್ಚರಿಸಿದರು.
ಹಿಂದಿನ ಎನ್‍ಡಿಎ ಸರ್ಕಾರದ ಅವಧಿಯಲ್ಲಿ ಸಂವಿಧಾನ ಪರಾಮರ್ಶೆ ಪ್ರಯತ್ನ ನಡೆದಿತ್ತು. ಆಗ ತೀವ್ರ ವಿರೋಧವ್ಯಕ್ತವಾದ ಹಿನ್ನೆಲೆಯಲ್ಲಿ ಸುಮ್ಮನಾದರು. ಈಗ ನೀವು ಧರ್ಮ ನಿರಪೇಕ್ಷ ಪದವನ್ನು ಪಂಥ ನಿರಪೇಕ್ಷ ಪದ ಎಂದು ಬಳಸಬೇಕು ಎಂದು ವಾದಿಸುತ್ತಿದ್ದೀರಿ. ಸಂವಿಧಾನ ಪ್ರಸ್ತಾವನೆಯಾಗಲಿ, ಇನ್ನಿತರ ಅಂಶವನ್ನಾಗಲಿ ಬದಲಾಯಿಸಲು ಮುಂದಾದರೆ ಗಲಭೆ ಸೃಷ್ಟಿಯಾಗುತ್ತದೆ ಎಂದರು.
ಇದಷ್ಟೇ ಅಲ್ಲ, ದೇಶಕ್ಕಾಗಿ ಕಾಂಗ್ರೆಸ್ ಏನೂ ಮಾಡಲಿಲ್ಲ ಎಂಬ ಎನ್‍ಡಿಎ ಸರ್ಕಾರದ ಆರೋಪಕ್ಕೆ ಉತ್ತರಿಸಿದ ಮಲ್ಲಿಕಾರ್ಜುನ ಖರ್ಗೆ ಅವರು,``ಆರಂಭದಿಂದಲೂ ನೆಹರು ಸೇರಿದಂತೆ ವಿವಿಧ ನಾಯಕರು ಬಲವಾಡ ಅಡಿಪಾಯ ಹಾಕಿದ್ದ ರಿಂದಲೇ ಈ ಮಟ್ಟದ ಬೆಳವಣಿಗೆಯಾಗಿದೆ. ಜತೆಗೆ ಆಹಾರದ ಹಕ್ಕು, ಶಿಕ್ಷಣದ ಹಕ್ಕನ್ನೂ ತಂದವರು ಕಾಂಗ್ರೆಸ್‍ನವರೇ'' ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ಸಚಿವ ವೆಂಕಯ್ಯನಾಯ್ಡು, ಖರ್ಗೆ ಬಳಕೆ ಮಾಡಿದ ಪದದ ಬಗ್ಗೆ ಆಕ್ಷೇಪವೆತ್ತಿ, ಅದು ಅಸಂಸದೀಯ ಪದ ಎಂದರು. ಈ ಹಂತದಲ್ಲಿ ಸ್ವೀಕರ್ ಸುಮಿತ್ರಾ ಮಹಾಜನ್, ಅದರ ಬಗ್ಗೆ ಕೇಳಿದರು. ಬಳಸಿದ್ದಾರೆಂದು ಖಚಿತ ಪಡಿಸಿಕೊಂಡ ನಂತರ ಆ ಪದವನ್ನು ತೆಗೆದುಹಾಕಲು ಸೂಚಿಸಿದರು.
ಈ ಪದ ತೆಗೆಯುವ ಬಗ್ಗೆ ಖರ್ಗೆ ಅವರೇನೂ ಆಕ್ಷೇಪ ಎತ್ತಲಿಲ್ಲ. ಆದರೆ, ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಏರಿದ ದನಿಯಲ್ಲಿ ಮಾತನಾಡುತ್ತಿದ್ದರಿಂದ, ನೀವೆಲ್ಲರೂ ಸಹಿಷ್ಣುತೆಯಿಂದ ಇರಬೇಕು. ನೀವು ಸಹಿಷ್ಣುತೆಯಿಂದ ಇರದಿದ್ದರೆ, ಅಸಹಿಷ್ಣುತೆ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸ್ಪೀಕರ್ ಮಹಾಜನ್ ಮಾರ್ಮಿಕವಾಗಿ ಹೇಳಿದರು.