ಬೆಂಗಳೂರು: ಪ್ರತಿಭಾವಂತ ಯುವ ಭಾರತೀಯರು ಹೆಚ್ಚು ಸಂಬಳ ನೀಡುವ ಉದ್ಯೋಗವನ್ನು ಎದುರು ನೋಡದೇ ಸ್ವಯಂ ಉದ್ಯಮಿಗಳಾಗುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬೆಂಗಳೂರಿನ ಲೀಲಾ ಪ್ಯಾಲೇಸ್ ಹೊಟೇಲ್ ನಲ್ಲಿ ನಡೆದ ಇಂಡೋ-ಜರ್ಮನ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯ ಯುವಕರು ಇತ್ತೀಚಿನ ದಿನಗಳಲ್ಲಿ ಕೇವಲ ಹೆಚ್ಚು ಸಂಬಳದ ಉದ್ಯೋಗಕ್ಕೆ ಆದ್ಯತೆ ನೀಡದೇ, ರಿಸ್ಕ್ ತೆಗೆದುಕೊಂಡು ಸ್ವಯಂ ಉದ್ಯಮಿಗಳಾಗುತ್ತಿದ್ದಾರೆ. ಪರಿಣಾಮ ಇತ್ತೀಚಿನ ದಿನಗಳಲ್ಲಿ ಭಾರತ ಉದ್ಯಮಗಳ ಸ್ಥಾಪನೆಯಲ್ಲಿ ಕ್ಷಿಪ್ರ ಬೆಳವಣಿಗೆಯನ್ನು ಕಾಣುತ್ತಿದೆ ಎಂದಿದ್ದಾರೆ.
ಭಾರತದ ಪ್ರತಿಭೆಗಳು ತಂತ್ರಜ್ಞಾನವನ್ನು ನೀಯಂತ್ರಿಸುತ್ತಿವೆ.ಹಾರ್ಡ್ ವೇರ್ ನ್ನು ವಿಶ್ವಾದ್ಯಂತ ಚಲಿಸುವಂತೆ ಮಾಡುತ್ತಿರುವುದು ಭಾರತದ ಸಾಫ್ಟ್ ವೇರ್ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮೆಕ್ ಇನ್ ಇಂಡಿಯಾ ಅಭಿಯಾನಕ್ಕೆ ಒತ್ತು ಕೊಡುವುದನ್ನು ಮರೆಯದ ಪ್ರಧಾನಿ ನರೇಂದ್ರ ಮೋದಿ, ಹೊರಗಿನ ಬಂಡವಾಳ, ತಂತ್ರಜ್ಞಾನ, ಪ್ರತಿಭೆಗಳನ್ನು ಪಡೆಯುವುದಕ್ಕೆ ಭಾರತ ಈ ಹಿಂದೆಂದಿಗಿಂತಲೂ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.
ಜಾಗತಿಕ ಆರ್ಥಿಕತೆ ಕುಂಠಿತವಾಗಿದ್ದರೂ ಭಾರತ ಬಂಡವಾಳ ಹೂಡಿಕೆಗೆ ಉಜ್ವಲ ತಾಣವಾಗಿದೆ. ಭಾರತವನ್ನು ಉದ್ಯಮ ಸ್ನೇಹಿಯನ್ನಾಗಿಸುವುದಕ್ಕೆ ಕಳೆದ 15 ತಿಂಗಳಿಂದ ಭಾರತ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಕೈಗಾರಿಕೆ ಹಾಗೂ ಮೂಲಸೌಕರ್ಯಕ್ಕೆ ಅಗತ್ಯವಿರುವ ಅನುಮೋದನೆ ಹಾಗೂ ಪರವಾನಗಿಗಳನ್ನು ತ್ವರಿತವಾಗಿ ನೀಡಲಾಗುತ್ತಿದ್ದು ಉದ್ಯಮಿಗಳಿಗೆ ಬಂಡವಾಳ ಹೂಡಲು ಅನುಕೂಲಕರ ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ.
"ಭಾರತದ ಹೂಡಿಕೆದಾರರನ್ನು ಜರ್ಮನಿ ಸ್ವಾಗತಿಸುತ್ತದೆ, ಡಿಜಿಟಲೈಜೇಷನ್ ಕ್ಷೆತ್ರದಲ್ಲಿ ಭಾರತ-ಜರ್ಮನಿಗೆ ಉತ್ತಮ ಭವಿಷ್ಯವಿದೆ ಎಂದು ಜರ್ಮನಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಹೇಳಿದ್ದಾರೆ.