ಕರ್ನಾಟಕದ ರೈತರು ಮೋದಿ ಅವರಿಗೆ ಭಾರತದ ರೈತರಂತೆ ಕಾಣುತ್ತಿಲ್ಲ: ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ರೈತರು ಭಾರತದ ರೈತರಂತೆ ಕಾಣುತ್ತಿಲ್ಲ. ಅವರನ್ನು ಪಕೀಯರಂತೆ ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ...
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ರೈತರು ಭಾರತದ ರೈತರಂತೆ ಕಾಣುತ್ತಿಲ್ಲ. ಅವರನ್ನು ಪಕೀಯರಂತೆ ನೋಡುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಸಂಜೆ ನಡೆದ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನೆಸಿದರು. ಬಿಜೆಪಿ ಸರ್ಕಾರ ಕೇವಲ ಭರವಸೆಗಳನ್ನು ನೀಡುತ್ತಿದೆಯೇ ಹೊರತು ಅವುಗಳನ್ನು ಈಡೇರಿಸುವತ್ತ ಗಮನ ಹರಿಸುತ್ತಿಲ್ಲ. ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ನೀಡಿದ್ದ ಯಾವುದಾದರೂ ಆಶ್ವಾಸನೆ ಈಡೇರಿದೆಯೇ..? ಕಪ್ಪುಹಣ ಕುರಿತ ಅವರ ವಾಗ್ದಾನ ಏನಾಯ್ತು ಎಂದು ರಾಹುಲ್ ಪ್ರಶ್ನಿಸಿದರು.
ಪ್ರಧಾನಿ ಮೋದಿ ಸರ್ಕಾರಕ್ಕೆ ಉದ್ಯಮಿಗಳು ಬೇಕು. ಹೀಗಾಗಿ ವಿದೇಶಗಳನ್ನು ಸುತ್ತುತ್ತಾ ಉದ್ಯಮಿಗಳನ್ನು ಭೇಟಿ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಬಡವರು ಮತ್ತು ರೈತರು ಬೇಕು. ಹೀಗಾಗಿ ರೈತರ ಬಳಿಗೆ ಬಂದಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇವಲ ಬಿಜೆಪಿ ಅಧಿಕಾರವಿರುವ ರಾಜ್ಯಗಳ ರೈತರು ಮಾತ್ರ ಭಾರತದ ರೈತರಂತೆ ಕಂಡುಬರುತ್ತಾರೆ. ಬಿಹಾರದಲ್ಲಿ ಚುನಾವಣೆ ಇರುವುದರಿಂದ ಅಲ್ಲಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಆದರೆ ಕರ್ನಾಟಕ ಭೀಕರ ಬರಗಾಲದಿಂದ ಪರಿತಪಿಸುತ್ತಿದ್ದರೂ, ಇತ್ತ ನೋಡಿಲ್ಲ. ಕನಿಷ್ಠ ರೈತರ ಆತ್ಮ ವಿಶ್ವಾಸ ಹೆಚ್ಚಿಸುವ ಕೆಲಸವನ್ನೂ ಮಾಡಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
ನಾಳೆ ರೈತ ಪರ ಘೋಷಣೆ
ರಾಜ್ಯದ ರೈತರ ಸಮಸ್ಯೆ ಕುರಿತಂತೆ ರಮೇಶ್ ಕುಮಾರ್ ವರದಿಯನ್ನು ಜಾರಿ ಮಾಡುವಂತೆ ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದರು. ನಾಳೆ ರಾಜ್ಯ ಸರ್ಕಾರ ಕೆಲ ಘೋಷಣೆ ಮಾಡಲಿದ್ದು, ಇವು ರೈತರಿಗೆ ಅನುಕೂಲವಾಗುವ ಘೋಷಣೆಗಳಾಗಿರಲಿವೆ ಎಂದು ರಾಹುಲ್ ಭರವಸೆ ನೀಡಿದರು.
ಕಾಂಗ್ರೆಸ್ ಬಡವರ ಪಕ್ಷ ಎಂಬುದನ್ನು ಮನವರಿಕೆ ಮಾಡಿ: ಕಾರ್ಯಕರ್ತರಿಗೆ ತಾಕೀತು
ಇದೇ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಪಕ್ಷ ಆದಷ್ಟು ಜನತೆಯ ಮಧ್ಯದಲ್ಲಿರಬೇಕು. ಬಿಜೆಪಿಯಂತೆ ಕಾಂಗ್ರೆಸ್ ಉಧ್ಯಮಿಗಳ ಪಕ್ಷವಲ್ಲ. ಇದು ಬಡವರ ಪಕ್ಷ ಎಂಬುದನ್ನು ಜನತೆ ಮನಗಾಣಬೇಕು.ಈ ಬಗ್ಗೆ ಕಾರ್ಯಕರ್ತರು ಕಾರ್ಯಮಗ್ನರಾಗಬೇಕು ಎಂದು ಹೇಳಿದರು.
ವಂದೇಮಾತರಂ ಗಾಯನ ಮುಗಿಯುವ ಮುನ್ನವೇ ಕುಳಿತ ನಾಯಕರು
ಇದೇ ವೇಳೆ ಕಾರ್ಯಕ್ರಮದ ಆರಂಭದಲ್ಲಿ ಖ್ಯಾತ ಗಾಯಕಿ ಸಂಗೀತ ಕಟ್ಟಿ ಮತ್ತು ತಂಡ ವಂದೇ ಮಾತರಂ ಗೀತೆಯನ್ನು ಹಾಡುತ್ತಿದ್ದರು. ಗಾಯನದ ಮಧ್ಯೆಯೇ ಕೆಲ ನಾಯಕರು ಗಾಯನ ಮುಗಿದಿದೆ ಎಂದು ಭಾವಿಸಿ ತಮ್ಮ-ತಮ್ಮ ಕುರ್ಚಿಗಳಲ್ಲಿ ಆಸೀನರಾದರು. ಆದರೆ ಗಾಯನ ಮುಂದುವರೆಯುತ್ತಿರುವುದನ್ನು ಗಮನಿಸಿದ ನಾಯಕರು ಮತ್ತೆ ಕುರ್ಚಿಯಿಂದ ಎದ್ದು ಗೀತೆಗೆ ಗೌರವ ಸಲ್ಲಿಸಿದರು.
2 ದಿನಗಳ ಕರ್ನಾಟಕ ರಾಜ್ಯ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಂಡ್ಯದಿಂದ ಸಂಜೆ 4.30ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದರು. ಪಾಂಡವಪುರದ ಮೃತ ರೈತನಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಹೆಲಿಕಾಪ್ಟರ್ನಲ್ಲಿ ಬೆಂಗಳೂರಿಗೆ ಆಗಮಿಸಿ ರಾಹುಲ್, ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿನ ಕಾಂಗ್ರೆಸ್ ಪ್ರತಿನಿಧಿಗಳ ಸಮಾವೇಶದಲ್ಲಿ ಪಾಲ್ಗೊಂಡರು. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸೇರಿದಂತೆ ಹಲವಾರು ಸಚಿವರು, ಸಂಸತ್ ಸದಸ್ಯರು ಹಾಗೂ ಪಕ್ಷದ ಇತರ ಮುಖಂಡರು ಉಪಸ್ಥಿತರಿದ್ದರು. ಮುಂಬರುವ ತಾಲ್ಲೂಕು ಪಂಚಾಯತ್ ಚುನಾವಣೆ ಹಿನ್ನಲೆಯಲ್ಲಿ ಈ ಸಮಾವೇಶ ಪ್ರಾಮುಖ್ಯತೆ ಪಡೆದಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.