ನಾಗಪುರ್: ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹ್ಮೂದ್ ಕಸೂರಿ ಅವರ ಪುಸ್ತಕ ಬಿಡುಗಡೆ ಆಯೋಜಿಸಿದ್ದನ್ನು ವಿರೋಧಿಸಿ ಪತ್ರಕರ್ತ ಸುಧೀಂದ್ರ ಕುಲಕರ್ಣಿ ಅವರ ಮುಖಕ್ಕೆ ಮಸಿ ಬಳಿದ ಶಿವಸೇನಾ ಪಕ್ಷದ ಕ್ರಮವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಎಂ ಜಿ ವೈದ್ಯ ಬುಧವಾರ ತೀವ್ರವಾಗಿ ಟೀಕಿಸಿದ್ದು , ಜನರಿಗೆ ಪ್ರತಿಭಟಿಸುವ ಹಕ್ಕಿದೆ ಆದರೆ ಕಾನೂನಿಗೆ ಬದ್ಧವಾಗಿರದೆ ಇರುವುದು ಸರಿಯಲ್ಲ ಎಂದಿದ್ದಾರೆ.
"ದಾದ್ರಿ ಘಟನೆ ಅಥವಾ ಸುಧೀಂದ್ರ ಕುಲಕರ್ಣಿ ಅವರ ಮುಖಕ್ಕೆ ಮಸಿ ಬಳಿದ ಎರಡೂ ಘಟನೆಗಳು ಖಂಡನೀಯ ಮತ್ತು ದುರದೃಷ್ಟಕರ. ಜನರಿಗೆ ಪ್ರತಿಭಟಿಸುವ ಹಕ್ಕಿದೆ ಆದರೆ ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ" ಎಂದು ವೈದ್ಯ ತಿಳಿಸಿದ್ದಾರೆ.
"ಪ್ರತಿಭಟನೆ ಮಾಡಲು ಹಲವು ಮಾರ್ಗಗಳಿವೆ ಆದರೆ ಒಬ್ಬನನ್ನು ಅಪಮಾನ ಮಾಡುವ ಕ್ರಮ ಸರಿಯಲ್ಲ" ಎಂದು ಕೂಡ ಅವರು ತಿಳಿಸಿದ್ದಾರೆ.
ಕುಲಕರ್ಣಿ ಅವರ ಮುಖಕ್ಕೆ ಮಸಿ ಬಳಿದು ಶಿವಸೇನಾ ಕೆಟ್ಟ ಹೆಸರು ಗಳಿಸಿಕೊಂಡಿದೆ ಎಂದು ವೈದ್ಯ ಹೇಳಿದ್ದಾರೆ.
ಕುಲಕರ್ಣಿ ಮೇಲೆ ನಡೆದ ಮಸಿ ದಾಳಿ ಪಕ್ಷಕ್ಕೆ ಕೆಟ್ಟ ಹೆಸರು ತಂದಿದೆ ಎಂದು ಪತ್ರಿಕಾ ಘೋಷ್ಟಿಯಲ್ಲಿ ಹೇಳಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಅವರ ಹೇಳಿಕೆಯನ್ನು ಟೀಕಿಸಿದ್ದ ಶಿವ ಸೇನಾ, ಮೈತ್ರಿಯಿಂದ ಹೊರಬರುವಂತೆ ಬೆದರಿಕೆ ಹಾಕಿತ್ತು.