ಬೆಂಗಳೂರು: ``ಜುಲೈ, ಆಗಸ್ಟ್ , ಸೆಪ್ಟೆಂಬರ್‍ನಲ್ಲಿ (2012) ಮಲ್ಲೇಶ್ವರ, ಜೆ.ಪಿ.ನಗರ, ಅರಮನೆ ಮೈದಾನದಲ್ಲಿ ರಾಘವೇಶ್ವರ ಸ್ವಾಮೀಜಿ ಕಾರ್ಯಕ್ರಮಗಳಿದ್ದವು. ಎರಡು ತಿಂಗಳ ಚಾತುರ್ಮಾಸ ಇದ್ದುದ್ದರಿಂದ ಗಿರಿನಗರ ಮಠದಲ್ಲೇ ಉಳಿದುಕೊಂಡು ಚಾತುರ್ಮಾಸ ಆಚರಿಸುತ್ತಿದ್ದರು. ಅಲ್ಲೂ ಮೀಟಿಂಗ್ ಹೆಸರಿನಲ್ಲಿ ಕರೆಸಿಕೊಂಡು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ'' ಎಂದು ರಾಮಕಥಾ ಗಾಯಕಿ ಪ್ರೇಮಲತಾ ಸಿಐಡಿ ತನಿಖೆ ವೇಳೆ ಹೇಳಿದ್ದಾರೆ.
ಈ ಸಂಗತಿ ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ದಾಖಲಾಗಿದೆ. ``ನಾನು `ಇದಕ್ಕೆ ಕೊನೆಯಿಲ್ಲವೇ' ಎಂದು ಕೇಳಿದಾಗ ಸ್ವಾಮೀಜಿಗಳು `ನಮ್ಮದು ಭೋಗ ವರ್ಧನವಾಳ ಪರಂಪರೆ ಮತ್ತು ಇದು ರಾಜಗೂರು ಪೀಠ, ಹಾಗಾಗಿ ನಾವು ಈ ಭೋಗಗಳನ್ನು ಅನುಭವಿಸಬಹುದು. ಹಿಂದಿನ ಸ್ವಾಮೀಜಿಗಳಾದ ಆದಿಶಂಕರಾಚಾರ್ಯರಿಗೂ ಸ್ತ್ರೀ ಸಂಪರ್ಕದಿಂದ ಬರುವ ರೋಗಗಳಿದ್ದವು. ನಮ್ಮ ದೊಡ್ಡ ಸ್ವಾಮೀಜಿಯೊಬ್ಬರು ಒಬ್ಬ ಭಕ್ತೆಯ ಮನೆಯಲ್ಲಿಯೇ ಬಹಳ ದಿನಗಳ ಕಾಲ ಉಳಿದಿದ್ದು ಅವರಿಗೂ ಆಕೆಗೂ ಸಂಪರ್ಕವಿತ್ತು.
ಹಲವರು ತಾವಾಗಿಯೇ ಬಾಗಿಲ ಚಿಲಕ ಹಾಕಿ ನಮ್ಮ ಬಳಿ ಬರುತ್ತಾರೆ. ಬೇರೆಯವರು ಹತ್ತಿಪ್ಪತ್ತು ಬಾರಿ ನಮಗೆ ಕೇಳಿದರೆ ನಾವು ಒಮ್ಮೆ ಮಾತ್ರ ಕರುಣಿಸುವುದು. ನಿನ್ನ ವಿಷಯದಲ್ಲಿ ಹಾಗಲ್ಲ. ಇದು ನಿನ್ನ ಸೌಭಾಗ್ಯ'' ಎಂದು ಸ್ವಾಮೀಜಿ ಹೇಳಿರುತ್ತಾರೆ. ರಾಮಕಥಾ ಗಾಯಕಿ ಪ್ರೇಮಲತಾ ಅವರ ವಿರುದ್ಧ ಅತ್ಯಾಚಾರ ಆರೋಪ ಎದುರಿಸುತ್ತಿರುವ ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಅವರ ವಿರುದ್ಧ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಈ ವಿಷಯ ಉಲ್ಲೇಖಿಸಲಾಗಿದೆ.
``ಇಷ್ಟು ದೊಡ್ಡ ಪರಂಪರೆಯ ಪೀಠದಲ್ಲಿ ಕುಳಿತು ಗೊತ್ತಿದ್ದುಕೊಂಡು ನಾವೇ ಇಷ್ಟು ದೊಡ್ಡ ಅಪರಾಧ ಮಾಡುತ್ತಿರುವಾಗ ನೀನು ಯಾಕೆ ಇಷ್ಟು ಚಿಂತೆ ಮಾಡುತ್ತೀಯಾ ಎಂದು ನನಗೆ ಹೇಳಿರುತ್ತಾರೆ. 2012ರ ಚಾತುರ್ಮಾಸ ವೃತದ ಸಂದರ್ಭದಲ್ಲಿ ಗಿರಿನಗರ ಆಶ್ರಮದಲ್ಲಿದ್ದು ಇಂತಹ ಹಲವು ಮಾತುಗಳನ್ನು ಹೇಳಿರುತ್ತಾರೆ. ನಿನ್ನ ಗಂಡನಿಗೆ ಭಾವನೆಗಳು ಕಡಿಮೆ.
ನಿನಗೆ ಭಾವನೆಗಳು ಹೆಚ್ಚು. ನಿನ್ನ ಗಂಡನ ಜಾತಕ ಸರಿಯಿಲ್ಲ. ಆದುದರಿಂದ ನಿನ್ನ ಗಂಡನೊಂದಿಗೆ ಮದುವೆಯಾಗಿದೆ ಎಂದು ಆಗಾಗ ಸಮಾಧಾನ ಹೇಳುತ್ತಿದ್ದರು. ಸ್ವಾಮಿಗಳು ಹೇಳಿದ ತಕ್ಷಣ ಸ್ಪಂದಿಸಬೇಕು. ಇಲ್ಲದಿದ್ದರೆ ಅವರಿಗೆ ಕೋಪ ಬರುತ್ತಿತ್ತು. ನನ್ನ ಭಾವನೆಗಳ ವ್ಯತ್ಯಾಸವನ್ನು ನನ್ನ ಯಜಮಾನರು ಗಮನಿಸುತ್ತಿದ್ದರು'' ಎಂದು ಗಾಯಕಿ ತಿಳಿಸಿದ್ದಾರೆ.
ಅತ್ಯಾಚಾರದ ನಂತರ ರಾಮನಿಗೆ ನಮಸ್ಕಾರ:
ಕಳೆದ 2011ರ ಅ.27ರಿಂದ ನ.5ರವೆಗೆ ಗಿರಿನಗರದ ರಾಮಾಶ್ರಮದಲ್ಲಿದ್ದರು. ಅಲ್ಲಿಯೂ ಮೀಟಿಂಗ್ ಹೆಸರಿನಲ್ಲಿ ನಾಲ್ಕೈದು ಬಾರಿ ಅತ್ಯಾಚಾರ ಎಸಗಿದರು. ಗಿರಿನಗರದಲ್ಲಿ ರಾಮನಿಗೆ ನಮಸ್ಕಾರ ಮಾಡುವಾಗ ಅವರು ತನ್ನ ಕೈಯನ್ನು ನನ್ನ ಕೈ ಜತೆ ಸೇರಿಸಿ ಒಟ್ಟಿಗೆ ನಮಸ್ಕಾರ ಮಾಡುತ್ತಿದ್ದರು. ಬಲತ್ಕಾರ ಮಾಡುವ ಮುಂಚೆ ಅವರ ಕೊರಳಿನಲ್ಲಿರುವ ಸ್ಫಟಿಕದ ಮಾಲೆಯನ್ನು ತೆಗೆದಿಡುತ್ತಿದ್ದರು. ಅತ್ಯಾಚಾರದ ನಂತರ ರಾಮನಮೂರ್ತಿ ಮುಂದೆ ನನ್ನಿಂದ ಆ ಮಾಲೆಯನ್ನು ಅವರು ಹಾಕಿಸಿಕೊಳ್ಳುತ್ತಿದ್ದರು ಎನ್ನುವ ಸಂಗತಿಯನ್ನೂ ಗಾಯಕಿ ತಿಳಿಸಿದ್ದಾರೆ.
ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ:
ಸ್ವಾಮೀಜಿ ನನ್ನ ಬಾಯಿಯಲ್ಲಿ ಅಶ್ಲೀಲ ಶಬ್ದಗಳನ್ನು ಹೇಳು ಅಥವಾ ಇ-ಮೇಲ್ ಮೂಲಕ ಬರೆದು ಕಳುಹಿಸು ಎಂದು ಒತ್ತಾಯ ಮಾಡುತ್ತಿದ್ದರು. ಅವರ ಒತ್ತಾಯಕ್ಕೆ ಮಣಿದು `ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ' ಎಂದು ಇ ಮೇಲ್ ಮಾಡಿದ್ದೆ. ಬಳಿಕ ಅವರೇ ಡಿಲೀಟ್ ಮಾಡಿಸಿದ್ದರು ಎಂಬುದಾಗಿಯೂ ಪ್ರೇಮಲತಾ ಹೇಳಿದ್ದಾರೆ.