ಮೊಳಗಿತು 60ನೇ ಕನ್ನಡ ರಾಜ್ಯೋತ್ಸವ
ರಾಜ್ಯದೆಲ್ಲೆಡೆ ಸಂಭ್ರಮದಿಂದ 60ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಧ್ವಜಾರೋಹಣ ಮಾಡಿದರು...
ಬೆಂಗಳೂರು: ರಾಜ್ಯದೆಲ್ಲೆಡೆ ಸಂಭ್ರಮದಿಂದ 60ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಧ್ವಜಾರೋಹಣ ಮಾಡಿದರು.
ರಾಜ್ಯದಾದ್ಯಂತ 60ನೇ ಕನ್ನಡ ರಾಜ್ಯೋತ್ಸವ ಹಬ್ಬದ ಸಂಭ್ರಮಾಚರಣೆ ಮನೆಮಾಡಿದ್ದು, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡದ ಜ್ಯೋತಿ ಮೊಳಗುತ್ತಿದೆ. ಇಂದು ಬೆಳಿಗ್ಗೆ ಧ್ವಜಾರೋಹಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂತರ ಶಾಂತಿದೂತ ಸಂಕೇತ ಪಾರಿವಾಳವನ್ನು ಬಾನಂಗಳಕ್ಕೆ ಹಾರಿಬಿಟ್ಟರು. ಪಾರಿವಾಳ ಹಾರುತ್ತಿದ್ದಂತೆ ಆಗಸದಲ್ಲಿ ಕನ್ನಡ ಧ್ವಜ ಮಾದರಿಯ ಬಲೂನುಗಳು ಬಾನಿನಲ್ಲಿ ಚಿತ್ತಾರವನ್ನು ಮೂಡಿಸಿದ್ದವು. ಧ್ವಜಾರೋಹಣದ ನಂತರ ಮುಖ್ಯಮಂತ್ರಿಗಳಿಗೆ ಪೊಲೀಸ್ ಪಡೆಗಳು ಗೌರವ ವಂದನೆ ಸಲ್ಲಿಸಿದರು.
ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಹೇಳಿದರು.
ನಂತರ ಕ್ರೀಡಾಂಗಣದಲ್ಲಿ ನೆರೆದಿದ್ದ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಎಷ್ಟೇ ಎತ್ತರಕ್ಕೆ ಏರಿದರೂ ಕನ್ನಡ ಮರೆಯಬೇಡಿ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಪರಧರ್ಮ ಸಹಿಷ್ಣುತೆ ಕಡಿಮೆಯಾಗುತ್ತಿದೆ. ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ನಾವು ಕಾಣಬಹುದು. ಮಕ್ಕಳಲ್ಲಿ ಪರಧರ್ಮ ಸಹಿಷ್ಣುತೆಯನ್ನು ಬೆಳೆಸುವಲ್ಲಿ ಪೋಷಕರು ಮುಂದಾಗಬೇಕಿದೆ ಎಂದು ಹೇಳಿದರು. ಅಲ್ಲದೇ, ಇದೇ ವೇಳೆ 1 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ 1 ಜತೆ ಶೂ ಹಾಗೂ ಸಮವಸ್ತ್ರ ನೀಡುವ ಯೋಜನೆಯನ್ನು ಜಾರಿ ಮಾಡಿದರು.
ಭಾಷಾ ಮಾಧ್ಯಮದಲ್ಲಿ ಕನ್ನಡ ಕಡ್ಡಾಯವಾಗಬೇಕೆನ್ನುವುದು ರಾಜ್ಯ ಸರ್ಕಾರದ ಆಶಯ. ಆದರೆ, ಇದಕ್ಕೆ ಸುಪ್ರೀಕೋರ್ಟ್ ನಲ್ಲಿ ತಾತ್ಕಾಲಿಕ ಹಿನ್ನೆಡೆಯಾಗಿದೆ. ನಾವೇನು ಇಂಗ್ಲೀಷ್ ವಿರೋಧಿಗಳಲ್ಲ ಆದರೆ, ಕನ್ನಡಿಗರು ಕನ್ನಡ ಭಾಷೆಯನ್ನು ಮರೆಯಬಾರದು. ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಕಡ್ಡಾಯವಾಗುವ ವಿಶ್ವಾಸವಿದೆ ಎಂದು ಹೇಳಿದರು.
ರಾಜ್ಯದ ಪ್ರಮುಖ ಸಮಸ್ಯೆಗಳಲ್ಲೊಂದಾಗಿರುವ ಬರಗಾಲ ಮತ್ತು ರೈತರ ಆತ್ಮಹತ್ಯೆ ಕುರಿತಂತೆ ಮಾತನಾಡಿದ ಅವರು, ರಾಜ್ಯದಲ್ಲಿ ಇದೀಗ ಬರಗಾಲ ಸಮಸ್ಯೆ ತಲೆದೋರಿದ್ದು, ರಾಜ್ಯದಲ್ಲಿ ಕಪ್ಪು ಛಾಯೆ ಮೂಡಿದೆ. 136 ತಾಲೂಕುಗಳು ಬರಗಾಲಕ್ಕೆ ತುತ್ತಾಗಿವೆ ಎಂದು ಈ ಹಿಂದೆ ಘೋಷಿಸಿದ್ದೇವೆ. ಅನ್ನದಾತರ ಸಹಾಯಕ್ಕಾಗಿ ನಮ್ಮ ಸರ್ಕಾರ ಮುಂದಾಗಿದ್ದು, ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಪ್ರಾಥಮಿಕ ಶಿಕ್ಷಣ ಇಲಾಖೆ ಸಚಿವ ಕಿಮ್ಮನೆ ರತ್ನಾಕರ್ ಬೆಂಗಳೂರಿನ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಶಾಲಾ ಮಕ್ಕಳ ಶಿಸ್ತಿನ ಪಥಸಂಚಲನ ಹಾಗೂ ಬೆಂಗಳೂರು ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಸಮಾರಂಭದಲ್ಲಿ ಗಮನಸೆಳೆದವು