ಎಂಎಂ ಕಲಬುರ್ಗಿ ಹತ್ಯಾ ಪ್ರಕರಣದ ಶಂಕಿತ ಆರೋಪಿಗಳ ರೇಖಾ ಚಿತ್ರ 
ಪ್ರಧಾನ ಸುದ್ದಿ

ಕಲಬುರ್ಗಿ ಹತ್ಯೆ ಆರೋಪಿ ಚಿತ್ರ ಬಿಡುಗಡೆ

ವಿಚಾರವಾದಿ, ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಪ್ರಕರಣದ ಶೋಧ ಚುರುಕುಗೊಂಡಿದ್ದು, ಪೊಲೀಸರು ಬುಧವಾರ ಆರೋಪಿಯ ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದಾರೆ..

ಧಾರವಾಡ: ವಿಚಾರವಾದಿ, ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಪ್ರಕರಣದ ಶೋಧ ಚುರುಕುಗೊಂಡಿದ್ದು, ಪೊಲೀಸರು ಬುಧವಾರ ಆರೋಪಿಯ  ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

ಭಾನುವಾರ ಕಲ್ಯಾಣ ನಗರದ ಸ್ವಗೃಹದಲ್ಲಿ ಈ ಹತ್ಯೆ ನಡೆದ ಬಳಿಕ ಆರೋಪಿಗಳ ಶೋಧಕ್ಕೆ ಎಸಿಪಿ ನೇತೃತ್ವದಲ್ಲಿ ಪೊಲೀಸ್ ತಂಡ ರಚಿಸಲಾಗಿತ್ತು. ಈಗ ಪ್ರಕರಣದ ತನಿಖೆಯ ಹೊಣೆ ಹೊತ್ತಿರುವ ಡಿ.ಸಿ.ರಾಜಪ್ಪ ನೇತೃತ್ವದ ಸಿಐಡಿ ತಂಡ ಬುಧವಾರ ಮಧ್ಯಾಹ್ನ ಡಾ.ಕಲಬುರ್ಗಿ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಮಧ್ಯಾಹ್ನ 1.05ಕ್ಕೆ ಮನೆ ಪ್ರವೇಶಿಸಿ 3 ಗಂಟೆವರೆಗೂ ಕುಟುಂಬ ಸದಸ್ಯರ ಜತೆ ಅಧಿಕಾರಿಗಳು ಚರ್ಚಿಸಿದರು.

ಕಲಬುರ್ಗಿ ಅವರ ವಿರೋಧಿಗಳ ಬಗ್ಗೆ ಮಾಹಿತಿ ಕಲೆಹಾಕಿದರು. ಈ ಹಿಂದೆ ಕಲಬುರ್ಗಿ ಅವರಿಗೆ ಬಂದಿರುವ ಬೆದರಿಕೆ ಕರೆಗಳು, ಪತ್ರಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಬಳಿಕ ಮನೆ ಸುತ್ತ ಪರಿಶೀಲನೆ  ನಡೆಸಿದರು. ಮೂರು ದಿನಗಳ ಬಳಿಕ ಡಾ. ಕಲಬುರ್ಗಿ ಅವರ ಪತ್ನಿ, ನೆರೆ-ಹೊರೆಯವರ ಹೇಳಿಕೆ ಆಧರಿಸಿ ಪೊಲೀಸರು ಬುಧವಾರ ರೇಖಾಚಿತ್ರ ರಚಿಸಿ ಬಿಡುಗಡೆ ಮಾಡಿದ್ದಾರೆ. ಸುಳಿವು ಸಿಕ್ಕಲ್ಲಿ  ತಮಗೆ (0836-2233513, 9480802034) ಮಾಹಿತಿ ನೀಡುವಂತೆ ಕೋರಿದ್ದಾರೆ.

ಎರಡನೇ ಬಾರಿ: ಸಿಐಡಿ ತಂಡ ಕಲಬುರ್ಗಿ ಅವರ ಮನೆಗೆ ಭೇಟಿ ನೀಡಿರುವುದು ಇದು ಎರಡನೇ ಸಲ. ಮಂಗಳವಾರವೂ ಭೇಟಿ ನೀಡಿ ಮನೆಯವರಿಂದ ಮಾಹಿತಿ ಪಡೆದಿತ್ತು. ಈಗ ಇಡೀ ಮನೆ,  ಸುತ್ತಲಿನ ಪರಿಸರ ವಿಡಿಯೋ ಚಿತ್ರೀಕರಣ ಮಾಡಿ, ಹಿರಿಯ ಕವಿ ಚೆನ್ನವೀರ ಕಣವಿ, ಡಾ.ಶರ್ಮಾ, ಹರಕಮನಿ ಅವರ ಹೇಳಿಕೆ ಪಡೆಯಿತು. ಎಸ್ಪಿ ರಾಜಪ್ಪ ನೇತೃತ್ವದಲ್ಲಿ ಒಟ್ಟು 12 ಹಿರಿಯ  ಅಧಿಕಾರಿಗಳು ಈ ತಂಡದಲ್ಲಿದ್ದು, ಇವರಲ್ಲಿ ಮೂರು ತಂಡಗಳಾಗಿ ವಿಭಾಗಿಸಿ, ಮಾಹಿತಿ ಸಂಗ್ರಹ, ವಿಚಾರಣೆ, ನೆರೆ ರಾಜ್ಯಗಳ ಸಂಪರ್ಕದ ಅಧ್ಯಯನ ಇತ್ಯಾದಿಗಳನ್ನು ತನಿಖೆಯ ಭಾಗವಾಗಿ ನಿರ್ವಹಿಸುತ್ತಿದ್ದು, ಯಾವುದೇ ಅಧಿಕಾರಿ ಮಾಧ್ಯಮಗಳ ಎದುರು ಬಾಯಿ ಬಿಡುತ್ತಿಲ್ಲ. ಸಿಐಡಿ ಚಲನವಲನವನ್ನು ಗೌಪ್ಯವಾಗಿಟ್ಟು ಚುರುಕಿನ ತನಿಖೆ ನಡೆಸಿದೆ. ಹಂತಕರ ಅರಸಿ ಕೊಲ್ಲಾಪುರಕ್ಕೆ  ತೆರಳಿದ್ದ ಎಸಿಪಿ ನೇತೃತ್ವದ ಪೊಲೀಸ್ ತಂಡ ಧಾರವಾಡಕ್ಕೆ ವಾಪಸಾಗಿದ್ದು, ತಾವು ಸಂಗ್ರಹಿಸಿದ ಮಾಹಿತಿಯನ್ನು ಸಿಐಡಿ ತಂಡಕ್ಕೆ ಒಪ್ಪಿಸುತ್ತಿದ್ದಾರೆ ಎನ್ನಲಾಗಿದೆ.

ಪ್ರಕರಣ ಸಿಬಿಐಗೆ ಬೇಡ: ಡಾ. ಎಂ.ಎಂ. ಕಲಬುರ್ಗಿ ಅವರ ಹತ್ಯೆ ತಿಳಿದು ಬುಧವಾರ ಧಾರವಾಡಕ್ಕೆ ಧಾವಿಸಿದ್ದ ಮಹಾರಾಷ್ಟ್ರದ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಪದಾಧಿಕಾರಿಗಳು  ಯಾವುದೇ ಕಾರಣಕ್ಕೂ ಈ ಪ್ರಕರಣವನ್ನು ಸಿಬಿಐಗೆ ವಹಿಸದೇ ಸಿಐಡಿ ಅಧಿಕಾರಿಗಳೇ ಭೇದಿಸಲಿ ಎಂದು ಮನವಿ ಮಾಡಿದರು. ನೇರವಾಗಿ ಡಾ. ಕಲಬುರ್ಗಿ ಅವರ ಮನೆಗೆ ಆಗಮಿಸಿದ್ದ ಸಮಿತಿ  ಸದಸ್ಯರು ಕಲಬುರ್ಗಿ ಅವರ ಪತ್ನಿ-ಮಕ್ಕಳಿಗೆ ಸಾಂತ್ವನ ಹೇಳುವ ಜತೆಗೆ ಸಿಬಿಐ ತನಿಖೆ ನಿರಾಕರಿಸಿ ಎಂದು ಕೋರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಕಾರ್ಯಾಧ್ಯಕ್ಷ ಅವಿನಾಶ  ಪಾಟೀಲ್, ಮಹಾರಾಷ್ಟ್ರದ ಹಿರಿಯ ಚಿಂತಕ ನರೇಂದ್ರ ದಾಭೋಲ್ಕರ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹಾಗೆಯೇ ಕೊಲ್ಲಾಪುರದಲ್ಲಿ ವಿಚಾರವಾದಿ ಗೋವಿಂದ ಪಾನ್ಸರೆ ಅವರನ್ನು  ಹತ್ಯೆ ಮಾಡಲಾಯಿತು.

ಈ ಮೂರಕ್ಕೂ ಸಂಬಂಧವಿದೆ. ದಾಭೋಲ್ಕರ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದರೂ ಪ್ರಗತಿ ಕಂಡಿಲ್ಲ. ಹೀಗಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳೇ ಕಲಬುರ್ಗಿ ಅವರ ಪ್ರಕರಣ  ತನಿಖೆಯನ್ನು ನಡೆಸ ಬೇಕು. ಕುಟುಂಬದ ಸದಸ್ಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪ್ರಕರಣವನ್ನು ಸಿಬಿಐಗೆ ವಹಿಸುವುದು ಬೇಡವೆಂದು ಮನವಿ  ಮಾಡಲಾಗುವುದು ಎಂದರು.

ಧಾಬೋಲ್ಕರ್ ಹತ್ಯೆ ವರದಿಗೆ ಹೈ ಸೂಚನೆ
ಮುಂಬೈ: ನಿರ್ಭೀತ ಹೇಳಿಕೆಗಳಿಗೆ ಹೆಸರಾಗಿದ್ದ ಸಂಶೋಧಕ ಎಂ.ಎಂ. ಕಲಬುರ್ಗಿ ರೀತಿಯಲ್ಲೇ ಹತ್ಯೆಗೀಡಾಗಿದ್ದ ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಹತ್ಯೆಗೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಸಿಬಿಐಗೆ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.ದಾಭೋಲ್ಕರ್ ಅವರನ್ನು ದುಷ್ಕರ್ಮಿಗಳು ಆ.20, 2013ರಂದು ಹತ್ಯೆ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ