ಬೆಂಗಳೂರು: ಕಳಸಾ - ಬಂಡೂರಿ ನಾಲೆ, ಮಹದಾಯಿ ನದಿ ನೀರು ತಿರುವು ಯೊಜನೆ ಜಾರಿಗೆ ಆಗ್ರಹಿಸಿ ನಡೆಯುತ್ತಿರುವ ರೈತರ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ಕಬ್ಬು ಬೆಳೆಗಾರರ ಸಂಘ ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ಆದರೆ ಈ ಬಂದ್‌ಗೆ ರಾಜ್ಯ ರೈತ ಸಂಘ, ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿ ನೌಕರರ ಸಂಘ ಸೇರಿದಂತೆ ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಿಲ್ಲ.
ಬಂದ್ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ್ ಕುಮಾರ್ ಅವರು, ಸುಮಾರು 32ಕ್ಕೂ ಹೆಚ್ಚು ಸಂಘಟನೆಗಳು ನಾಳೆಯ ಬಂದ್‌ಗೆ ಬೆಂಬಲ ಘೋಷಿಸಿರುವುದಾಗಿ ತಿಳಿಸಿದ್ದಾರೆ.
ಬಂದ್ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದಾದರು ಕಾರ್ಯಕ್ರಮದಲ್ಲಿ ಭಾಗಿಯಾದರೆ, ಆ ಸಂದರ್ಭದಲ್ಲಿ ನಡೆಯುವ ಘಟನೆಗಳಿಗೆ ಸಿಎಂ ಅವರೇ ನೇರ ಹೊಣೆಯಾಗಲಿದ್ದಾರೆ ಎಂದು ಕುರುಬೂರು ಶಾಂತ್ ಕುಮಾರ್ ಎಚ್ಚರಿಸಿದ್ದಾರೆ.
ನಾಳೆಯ ಬಂದ್‌ಗೆ ಬೆಂಬಲವಿಲ್ಲ: ವಾಟಾಳ್
ನಾಳೆ ನಡೆಯಲಿರುವ ಕರ್ನಾಟಕ ಬಂದ್‌ಗೆ ಯಾವುದೇ ಕನ್ನಡಪರ ಸಂಘಟನೆಗಳಿಂದ ಬೆಂಬಲ ಇಲ್ಲ. ನಾವು ಸೆಪ್ಟೆಂಬರ್ 26ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದೇವೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಸ್ಪಷ್ಟಪಡಿಸಿದ್ದಾರೆ.