ಸಾಲ ಪಾವತಿಗೆ ಸಮಯ ಬೇಕು: ಸಿಎಂ ಸಿದ್ದರಾಮಯ್ಯ
ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ರೈತರು ಪಡೆದ ಸಾಲ ಮರುಪಾವತಿ ಅವಧಿ ವಿಸ್ತರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ರೈತರು ಪಡೆದ ಸಾಲ ಮರುಪಾವತಿ ಅವಧಿ ವಿಸ್ತರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಬ್ಯಾಂಕರ್‍ಗಳ 132ನೇ ಸಭೆಯಲ್ಲಿ ಮಾತನಾಡಿದ ಅವರು, ನಬಾರ್ಡ್ ಪುನರ್ ಧನ ಪ್ರಮಾಣವನ್ನು ಕೇಂದ್ರ ಸರ್ಕಾರ ಶೇ.50ರಿಂದ ಶೇ,40ಕ್ಕೆ ಇಳಿಸಿದೆ. ಇದರಿಂದ ರಾಜ್ಯದ ಸಾಲ ವಿತರಣೆ ಗುರಿ ಮುಟ್ಟುವುದಕ್ಕೆ ಕಷ್ಟವಾಗಬಹುದು ಎಂಬ ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದ 136 ತಾಲೂಕುಗಳಲ್ಲಿ ಬರ ಇದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ನಷ್ಟದಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹೀಗಾಗಿ ಬ್ಯಾಂಕ್ ಗಳು ಅವರ ನೆರವಿಗೆ ಬರಬೇಕು ಎಂದರು.
ಬೆಳೆ ಸಾಲ ಅವಧಿ ಜೂನ್‍ವರೆಗೂ ವಿಸ್ತರಿಸಬೇಕು. ಈಗಾಗಲೇ ಸಿಂಡಿಕೇಟ್ ಬ್ಯಾಂಕ್ ಸಮಗ್ರ ಅಭಿವೃದ್ಧಿಗಾಗಿ ಒಂದು ಹಳ್ಳಿ ದತ್ತು ತೆಗೆದುಕೊಂಡಿದೆ. ಇತರೆ ರಾಷ್ಟ್ರೀಕೃತ ಬ್ಯಾಂಕುಗಳು ಇದೇ ಕ್ರಮ ಅನುಸರಿಸಬೇಕು. ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳ ಪ್ರಬಂಧಕರು ಜಿಲ್ಲಾಡಳಿತದೊಂದಿಗೆ ಸಮಾಲೋಚಿಸಿ ಜಿಲ್ಲಾ ಬ್ಯಾಂಕರ್‍ಗಳ ಸಭೆಗಳಲ್ಲಿ ಚರ್ಚಿಸಿ ಬರ ಪರಿಸ್ಥಿತಿ ನಿರ್ವಹಣೆಗೆ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳು ವಂತೆ ತಿಳಿಸಿದರು.
ಸಿಂಡಿಕೇಟ್ ಬ್ಯಾಂಕ್ ಮತ್ತು ರಾಜ್ಯ ಮಟ್ಟದ ಬ್ಯಾಂಕರುಗಳ ಅಧ್ಯಕ್ಷ ಅರುಣ್ ಶ್ರೀವಾಸ್ತವ ಮಾತನಾಡಿ, ಪ್ರಧಾನಮಂತ್ರಿ ಜನಧನ ಯೋಜನೆ ಯಡಿಯಲ್ಲಿ ರು.78.37ಲಕ್ಷ ಮೂಲ ಉಳಿತಾಯ ಠೇವಣಿ ಖಾತೆಗಳನ್ನು ತೆರೆಯಲಾಗಿದೆ. ಅವುಗಳಲ್ಲಿ ಶೇ.35.10 ಶೂನ್ಯ ಠೇವಣಿ ಖಾತೆಗಳು, ಉಳಿದ 43.27ಲಕ್ಷ ಖಾತೆಗಳು ರು.747.69ಕೋಟಿ ಠೇವಣಿ ಇದೆ. 46.62ಲಕ್ಷ ಖಾತೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಹಾಗೂ 31.75 ಲಕ್ಷ ಖಾತೆಗಳು ನಗರ ಪ್ರದೇಶದಲ್ಲಿ ತೆರೆಯಲಾಗಿದೆ ಎಂದರು. ರಾಜ್ಯದ ಬ್ಯಾಂಕುಗಳು ಜೂ.2015 ವರೆಗಿನ ಪ್ರಗತಿ ಪರಿಶೀಲಿಸಿದರೆ ಒಟ್ಟು ಠೇವಣಿ ಮೊತ್ತ ರು.621031 ಕೋಟಿಗಳಿವೆ. ಇದರಲ್ಲಿ ರು. 454119 ಕೋಟಿ ಸಾಲ ನೀಡಲಾಗಿದೆ. ರಾಜ್ಯದ ಸಾಲಠೇವಣಿ ಅನುಪಾತವು ಕಳೆದ ಕೆಲವು ವರ್ಷಗಳಿಂದ ಸ್ಥಿರವಾಗಿದ್ದು ಶೇ.73ರಿಂದ 76ರ ಮಿತಿಯೊಳಗೆ ಇದೆ.
ಸ್ವಸಹಾಯ ಸಂಘಗಳಿಗೆ ರು. 1.25ಲಕ್ಷ ನೀಡಲಾಗುತ್ತಿದೆ. ಈ ಸಾಲ ರು.2.75ಲಕ್ಷಕ್ಕೆ ಏರಿಕೆ ಮಾಡಬೇಕೆಂದು ನಬಾರ್ಡ್ ಸಲಹೆ ನೀಡಿದೆ. ಇದನ್ನು ಅನುಷ್ಠಾನಗೊಳಿಸಲು ಬ್ಯಾಂಕುಗಳು ಚಿಂತಿಸಿಬೇಕು ಎಂದರು. ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಅಭಿವೃದ್ಧಿ ಆಯಕ್ತೆ ಲತಾ ಕೃಷ್ಣರಾವ್, ಆರ್ ಬಿಐ ಪ್ರಾದೇಶಿಕ ನಿರ್ದೇಶಕ ಇಗುನೆ ಇ ಕರ್ತಕ್ ಇದ್ದರು.