ಪ್ರಧಾನ ಸುದ್ದಿ

ಪನಾಮಾ ಲೀಕ್ಸ್ ನಲ್ಲಿ ಸಚಿವ ಶಾಮನೂರು ಶಿವಶಂಕರಪ್ಪ ಅಳಿಯನ ಹೆಸರು

Lingaraj Badiger
ಬೆಂಗಳೂರು: ಪನಾಮ ಲೀಕ್ಸ್ ನಲ್ಲಿ ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಅವರ ಅಳಿಯ ಸೇರಿದಂತೆ ಒಟ್ಟು 500 ಭಾರತೀಯರು ಕಪ್ಪು ಹಣವಿರಿಸಿರುವುದು ಪತ್ತೆಯಾಗಿದೆ. 
ಶಾಮನೂರು ಶಿವಶಂಕರಪ್ಪ ಅವರ 2ನೇ ಮಗಳ ಗಂಡ ರಾಜೇಂದ್ರ ಪಾಟೀಲ್ ಅವರು ತೆರಿಗೆ ವಂಚಿಸಿ ನಿಗೂಢವಾಗಿ ಸಂಪತ್ತು ಹೊಂದಿರುವ ಮಾಹಿತಿ ಜಾಗತಿಕ ಮಾಧ್ಯಮಗಳು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ.
ವಿಜಯಪುರ ಮೂಲದವರಾದ ಉದ್ಯಮಿ ರಾಜೇಂದ್ರ ಪಾಟೀಲ್ ಅವರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ಸೇರಿ ಎಲ್ಗನ್ ಬರ್ಗ್ ಲಿಮಿಟೆಡ್ ಎಂಬ ಸಂಸ್ಥೆ ಸ್ಥಾಪಿಸಿ, ಅದರಲ್ಲಿ 22, 500 ಷೇರುಗಳನ್ನು ಹೊಂದಿದ್ದಾರೆ. ವಿಳಾಸ ದೃಢೀಕರಣಕ್ಕಾಗಿ ಬೆಂಗಳೂರಿನ ಶಾಮನೂರು ಕುಟುಂಬ ಒಡೆತನದ ಕಾಂಪ್ಲೆಕ್ಸ್ ವಿಳಾಸ ನೀಡಿರುವುದು ಪನಾಮಾ ಪೇಪರ್ಸ್ ಲೀಕ್ ನಿಂದ ಬಹಿರಂಗವಾಗಿದೆ.
ಇನ್ನು ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಜೇಂದ್ರ ಪಾಟೀಲ್ ಅವರು, 2007ರಲ್ಲಿ ಸ್ನೇಹಿತರಾದ ಸಂಜಯ್ ನಾಡಗೌಡ, ಶಶಾಂಕ್ ಅಂಗಡಿ ಅವರೊಂದಿಗೆ ಸೇರಿ ನಾವು ಕೃಷಿ ಉತ್ಪನ್ನಕ್ಕೆ ಸಂಬಂಧಿಸಿದಂತೆ ಒಂದು ಕಂಪನಿ ಆರಂಭಿಸಿದ್ದು ಸತ್ಯ. ಆದರೆ ಮೊದಲ ವರ್ಷವೇ ನಮಗೆ 1 ಕೋಟಿ ರುಪಾಯಿ ನಷ್ಟವಾಗಿದ್ದರಿಂದ ಅದೇ ವರ್ಷ ನಾವು ಕಂಪನಿಯನ್ನು ಮುಚ್ಚಿದೆವು ಎಂದು ಹೇಳಿದ್ದಾರೆ.
ವಿಶ್ವದಲ್ಲಿರುವ ಶ್ರೀಮಂತ ಮತ್ತು ಪ್ರಖ್ಯಾತ ವ್ಯಕ್ತಿಗಳ ವಿದೇಶ ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟ ಸಾಮೂಹಿಕ ಲಕ್ಷಾಂತರ ದಾಖಲೆಗಳು ಸೋರಿಕೆಯಾಗಿದ್ದು, ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್, ಐಶ್ವರ್ಯ ರೈ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ನವಾಜ್ ಷರೀಫ್, ಲಿಯೋನೆಲ್ ಮೆಸ್ಸಿ ಸೇರಿದಂತೆ 500 ಮಂದಿ ಭಾರತೀಯರು, ಮುಂಬೈ ಭೂಗತ ಪಾತಕಿಗಳ ಹೆಸರುಗಳು ಕೇಳಿಬರುತ್ತಿವೆ.
ರಹಸ್ಯ ಕಾರ್ಯಾಚರಣೆಯಲ್ಲಿ ಒಟ್ಟು 1.15 ಕೋಟಿ ಕಡತಗಳ ಮಾಹಿತಿ ಬಹಿರಂಗವಾಗಿದೆ ಎನ್ನಲಾಗಿದೆ.
ಭಾರತ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ವಿದೇಶಗಳಲ್ಲಿರುವ ಕಪ್ಪು ಹಣವನ್ನು ತರುವ ಬಗ್ಗೆ ಹೊಸ ವರದಿ ಸಿದ್ದಪಡಿಸುತ್ತಿರುವ ಹೊತ್ತಿನಲ್ಲಿ ಪನಾಮಾ ಪೇಪರ್ಸ್ ಸೋರಿಕೆಯಾಗಿದೆ. ವಿದೇಶಗಳಲ್ಲಿರುವ ಸಂಪತ್ತು ಮತ್ತು ಹಣದ ವಿವರಗಳನ್ನು ನೀಡಲು 90 ದಿನಗಳ ಅನುಸರಣೆ ಯೋಜನೆ(ಕಾಂಪ್ಲಿಯನ್ಸ್ ಸ್ಕೀಮ್) ಕಳೆದ ಸೆಪ್ಟೆಂಬರ್ ಗೆ ಮುಕ್ತಾಯಗೊಂಡಿದ್ದು, ಇದುವರೆಗೆ ಕೇವಲ 3 ಸಾವಿರದ 770 ಕೋಟಿ ರೂಪಾಯಿ ತರಲಾಗಿದೆಯಷ್ಟೆ.
SCROLL FOR NEXT