ನವದೆಹಲಿ: ಶ್ರೀನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ ಐ ಟಿ) ವಿದ್ಯಾರ್ಥಿಗಳ ವಿರುದ್ಧದ ಪೊಲೀಸರ ಕ್ರಮವನ್ನು ಖಂಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ "ಇದನ್ನು ಕೂಡಲೇ ನಿಲ್ಲಿಸಬೇಕೆಂದು" ಆಗ್ರಹಿಸಿದ್ದಾರೆ.
"ಶ್ರೀನಗರದಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಖಂಡನೀಯ. ಬಿಜೆಪಿ-ಪಿಡಿಪಿ ಇದನ್ನು ಕೂಡಲೇ ನಿಲ್ಲಿಸಬೇಕು" ಎಂದು ಆಮ ಆದ್ಮಿ ಪಕ್ಷದ ಅಧ್ಯಕ್ಷ ಟ್ವೀಟ್ ಮಾಡಿದ್ದಾರೆ.
"ಭಾರತೀಯ ಜನತಾ ಪಕ್ಷ ಕಾಶ್ಮೀರದಲ್ಲಿ 'ಭಾರತ ಮಾತಾಕಿ ಜೈ' ಅನ್ನುವವರನ್ನು ಥಳಿಸುತ್ತಿದೆ, ದೇಶದಲ್ಲಿ ಇನ್ನುಳಿದೆಲ್ಲೆಡೆ ಹಾಗೆ ಹೇಳದವರನ್ನು ಥಳಿಸುತ್ತಿದೆ" ಎಂದು ಕೂಡ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಮಂಗಳವಾರ ಸಂಜೆ ಕ್ಯಾಂಪಸ್ ನಲ್ಲಿ ಅನ್ಯ ಕಾಶ್ಮೀರಿ ವಿದ್ಯಾರ್ಥಿಗಳಿಗೂ ಮತ್ತು ಪೊಲೀಸರಿಗೂ ನಡೆದ ಘರ್ಷಣೆಯಲ್ಲಿ ಉದ್ವಿಘ್ನ ವಾತಾವರಣ ಉಂತಾಗಿತ್ತು.
ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು. ಈ ಘರ್ಷಣೆಯಲ್ಲಿ ಸುಮಾರು ಏಳು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು.
ಮಾರ್ಚ್ ೩೧ರಂದು ಟಿ೨೦ ಸೆಮಿಫೈನಲ್ಸ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಕ್ರಿಕೆಟ್ ತಂಡ ಸೋತಿದ್ದಕ್ಕೆ ಕೆಲವು ಕಾಶ್ಮೀರಿ ವಿದ್ಯಾರ್ಥಿಗಳು ಸಂಭ್ರಮಿಸಿದ್ದರಿಂದ ಉದ್ವಿಘ್ನ ವಾತಾವರಣ ಉಂಟಾಗಿತ್ತು. ಇದಕ್ಕೆ ವಿರೋಧಿಸಿದ್ದ ಅನ್ಯ ಕಾಶ್ಮೀರಿ ವಿದ್ಯಾರ್ಥಿಗಳು ಘರ್ಷಣೆಗೆ ಇಳಿದಿದ್ದರು.