ಪ್ರಧಾನ ಸುದ್ದಿ

ಬಿಹಾರ ಮದ್ಯ ನಿಷೇಧದಿಂದ ಬೇಸರವಾಗಿದೆ: ರಿಷಿ ಕಪೂರ್

Guruprasad Narayana

ಮುಂಬೈ: ನಿತೀಶ್ ಕುಮಾರ್ ಸರ್ಕಾರ ಬಿಹಾರದಲ್ಲಿ ಸಂಪೂರ್ಣ ಮದ್ಯ ನಿಷೇಧ ಜಾರಿ ಮಾಡಿರುವುದನ್ನು ಖಂಡಿಸಿರುವ ಖ್ಯಾತ ನಟ ರಿಷಿ ಕಪೂರ್, ಇನ್ನು ಮುಂದೆ ರಾಜ್ಯಕ್ಕೆ ಹೋಗುವುದರಿಂದ ಹಿಂದೆ ಉಳಿಯಬಹುದು ಎಂದಿದ್ದಾರೆ.

ಸರ್ಕಾರ ಮಂಗಳವಾರದಿಂದ ಬಿಹಾರದಲ್ಲಿ ಎಲ್ಲ ರೀತಿಯ ಮದ್ಯದ ಮೇಲೆ ಸಂಪೂರ್ಣ ನಿಷೇಧ ಹೇರಿದ್ದು, ಗುಜರಾತ್, ಮಣಿಪುರ, ನಾಗಾಲ್ಯಾಂಡ್ ನಂತರ ಈ ರೀತಿಯ ನಿಷೇಧ ಹೇರಿರುವ ನಾಲ್ಕನೇ ರಾಜ್ಯವಾಗಿದೆ.

ಈ ನಿಷೇಧದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಲು ರಿಷಿ ಕಪೂರ್ ಟ್ವೀಟ್ ಮಾಡಿದ್ದಾರೆ.

"ಬಿಹಾರ ಇದು ಕಳ್ಳಭಟ್ಟಿಗೆ ಉತ್ತೇಜನ ನೀಡುತ್ತದೆ. ವಿಶ್ವದಾದ್ಯಂತ ನಿಷೇದ ಸೋತಿದೆ. ಎದ್ದೇಳಿ! ನೀವು ೩೦೦೦ ಕೋಟಿ ವರಮಾನ ಕಳೆದುಕೊಳ್ಳಲಿದ್ದೀರಿ" ಎಂದು ರಿಷಿ ಟ್ವೀಟ್ ಮಾಡಿದ್ದಾರೆ.

"ಕಾನೂನುಬಾಹಿರವಾಗಿ ಶಸ್ತ್ರಾಸ್ತ್ರಗಳನ್ನು ಹೊಂದುವುದಕ್ಕೆ ಐದು ವರ್ಷ ಸಜೆ- ಮದ್ಯ ಹೊಂದಿದ್ದರೆ ೧೦ ವರ್ಷ? ವಾಹ್ ನಿತೇಶ್! ನಾನು ಬಿಹಾರಕ್ಕೆ ಬರುತ್ತಿಲ್ಲ! ನಿಮ್ಮ ದೂರದೃಷ್ಟಿ ಎಲ್ಲಿ ಹೋಯಿತು?" ಎಂದು ಅವರು ಬರೆದಿದ್ದಾರೆ.

ಜೊತೆಗೆ ೧೯೮೩ರ 'ಕೂಲಿ' ಸಿನೆಮಾದ ತಮ್ಮ ಫೋಟೋವೊಂದನ್ನು ಕೂಡ 'ಕಪೂರ್ಸ್ & ಸನ್ಸ್' ಸಿನೆಮಾದ ನಟ ಪ್ರಕಟಿಸಿದ್ದಾರೆ. "'ಕೂಲಿ' ದಿನಗಳಿಂದಲೂ ನಾನು ಕುಡಿಯುತ್ತಿದ್ದೇನೆ. ಆದರೆ ಧೂಮಪಾನ ಮತ್ತು ಮಧ್ಯಪಾನ ಆರೋಗ್ಯಕ್ಕೆ ಹಾನಿಕರ. ಜನರೇ ಇದರಿಂದ ದೂರವಿರಿ" ಎಂದು ಆ ಚಿತ್ರಕ್ಕೆ ಶೀರ್ಷಿಕೆ ಬರೆದಿದ್ದಾರೆ. 

SCROLL FOR NEXT