ಪ್ರಧಾನ ಸುದ್ದಿ

ನಿವೃತ್ತ ಐಪಿಎಸ್ ಅಧಿಕಾರಿ ಬಿಪಿನ್ ಗೋಪಾಲಕೃಷ್ಣ ನಿಧನ

Manjula VN

ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಬಿಪಿನ್ ಗೋಪಾಲಕೃಷ್ಣ ಅವರು ಗುರುವಾರ ನಿಧನರಾಗಿದ್ದಾರೆ.

ಹಲವು ದಿನಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಬಿಪಿನ್ ಗೋಪಾಲಕೃಷ್ಣ ಅವರು ನಗರದ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.

ಮೂಲತಃ ಆಂಧ್ರ ಪ್ರದೇಶದ ನೆಲ್ಲೂರಿನವರಾದ ಬಿಪಿನ್ ಗೋಪಾಲಕೃಷ್ಣ ಅವರು 1980ರ ಐಪಿಎಸ್ ಬ್ಯಾಚ್ ನ ಅಧಿಕಾರಿಯಾಗಿದ್ದರು. ಸಿಬಿಐ ಹಾಗೂ ರಾಜ್ಯ ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕದಲ್ಲಿ ಸೇವೆ ಆರಂಭಿಸಿದ ಇವರು, ಉಡುಪಿ ಜಿಲ್ಲೆಯ ಎಎಸ್ ಪಿಯಾಗಿ, ಚಿಕ್ಕಮಗಳೂರು, ಚಿತ್ರದುರ್ಗ, ಗುಲ್ಬರ್ಗ, ಮೈಸೂರು ಜಿಲ್ಲೆಗಳಲ್ಲಿ ಹಾಗೂ ಸಿಬಿಐಯಲ್ಲಿ ಎಸ್ ಪಿ ಯಾಗಿ ಸೇವೆ ಸಲ್ಲಿಸಿದ್ದಾರೆ.

ಇನ್ನು ಬಿಎಂಟಿಸಿಯಲ್ಲೂ ಸೇವೆ ಸಲ್ಲಿಸಿದ್ದ ಇವರು, ಮೈಸೂರು ಪೊಲೀಸ್ ಆಯುಕ್ತರಾಗಿ, ಗೃಹ ಕಾರ್ಯದರ್ಶಿಯಾಗಿ, ಬೆಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದರು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಐಜಿಪಿಯಾಗಿ, ಕಾರಾಗೃಹ, ಆಂತರಿಕ ಭದ್ರತೆ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಇನ್ನು ಬಿಪಿನ್ ಗೋಪಾಲಕೃಷ್ಣ ಅವರ ಉತ್ತಮ ಸೇವೆಗಾಗಿ 2000 ಹಾಗೂ 2006ರಲ್ಲಿ ರಾಷ್ಟ್ರಪತಿಗಳ ಪೊಲೀಸ್ ಪದಕ ಲಭಿಸಿತ್ತು.

SCROLL FOR NEXT