ಪ್ರಧಾನ ಸುದ್ದಿ

ಮೌಲ್ಯ ಮಾಪನ ಬಹಿಷ್ಕಾರ: ಪಿಯು ಉಪನ್ಯಾಸಕರಿಗೆ ನೋಟಿಸ್

Lingaraj Badiger

ಬೆಂಗಳೂರು: ವೇತನ ತಾರತಮ್ಯ ನಿವಾರಣೆ ಹಾಗೂ ಕುಮಾರ್ ನಾಯಕ್ ವರದಿ ಜಾರಿಗೆ ಆಗ್ರಹಿಸಿ ದ್ವಿತೀಯ ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿರುವ ಉಪನ್ಯಾಸಕರಿಗೆ ಪದವಿ ವೂರ್ವ ಶಿಕ್ಷಣ ಮಂಡಳಿ ಸೋಮವಾರ ನೋಟಿಸ್ ಜಾರಿ ಮಾಡಿದ್ದು, ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಕಳೆದ 17 ದಿನಗಳಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದು, ಇಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪಿಯು ಬೋರ್ಡ್ ಶಾಖಾಧಿಕಾರಿ ಹಾಗೂ ಸೂಪರಿಡೆಂಟ್ ಅವರು ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಅವರನ್ನು ಭೇಟಿ ಮಾಡಿ ನೋಟಿಸ್ ನೀಡಿದ್ದಾರೆ.

ಇನ್ನು ಪ್ರತಿಭಟನೆ ಕೈಬಿಟ್ಟು ಮೌಲ್ಯಮಾಪನಕ್ಕೆ ಹಾಜರಾಗದಿದ್ದರೆ ಉಪನ್ಯಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಎಚ್ಚರಿಸಿದ್ದಾರೆ.

ಸರ್ಕಾರ ಈಗಾಗಲೇ ತನ್ನ ನಿಲುವು ಸ್ಪಷ್ಟಪಡಿಸಿದ್ದು, ಮತ್ತೆ ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ. ಉಪನ್ಯಾಸಕರು ಕೂಡಲೇ ಪ್ರತಿಭಟನೆ ಕೈ ಬಿಟ್ಟು ಮೌಲ್ಯಮಾಪನಕ್ಕೆ ಹಾಜರಾಗಬೇಕು ಎಂದು ಮನವಿ ಮಾಡಿದರು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಸಿದರು.

ಇದೇ ವೇಳೆ ಮಾಧ್ಯಮಗಳ ವಿರುದ್ಧವೂ ವಾಗ್ದಾಳಿ ನಡೆಸಿದ ಸಚಿವರು, ಮಾಧ್ಯಮಗಳಿಗೆ ಪಿಯು ಫಲಿತಾಂಶ ನೀಡಲು ಆತುರ ಇರಬಹುದು. ಆದರೆ ಈ ಸಂಬಂಧ ಸರ್ಕಾರಕ್ಕೆ ಯಾವುದೇ ಆತರು ಇಲ್ಲ ಎಂದರು.

ಪಿಯು ಉಪನ್ಯಾಸಕರ ವೇತನ ಪರಿಷ್ಕರಣೆಗೆಂದು ರಚಿಸಿದ್ದ ಕುಮಾರ್ ನಾಯಕ್ ಅವರ ಸಮಿತಿ 2001ರಲ್ಲಿ ವರದಿ ಸಲ್ಲಿಸಿದರೂ ಸಹ ಸರ್ಕಾರ ಇದರ ಅನುಷ್ಠಾನಕ್ಕೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಪಿಯು ಉಪನ್ಯಾಸಕರು ಮೌಲ್ಯ ಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

SCROLL FOR NEXT