ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ 
ಪ್ರಧಾನ ಸುದ್ದಿ

ನಕಲಿ ಎನ್ ಕೌಂಟರ್ ಪ್ರಕರಣವನ್ನು ದಾರಿ ತಪ್ಪಿಸಲು ಪ್ರಧಾನಿ, ಷಾ ಯತ್ನ: ಕಾಂಗ್ರೆಸ್

ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಪಿ ಚಿದಂಬರಂ ಅವರಿಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಿರ್ದೇಶನ ನೀಡಿದ್ದಾರೆ ಎಂಬುದು ಸುಳ್ಳಿನ ಕಂತೆ...

ನವದೆಹಲಿ: ಇಶ್ರತ್ ಜಹಾನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಪಿ ಚಿದಂಬರಂ ಅವರಿಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಿರ್ದೇಶನ ನೀಡಿದ್ದಾರೆ ಎಂಬ ಬಿಜೆಪಿ ಆಪಾದನೆಯನ್ನು ಕಾಂಗ್ರೆಸ್ ತಳ್ಳಿಹಾಕಿದೆ.

ಅಲ್ಲದೆ ನಕಲಿ ಎನ್ ಕೌಂಟರ್ ಪ್ರಕರಣವನ್ನು ದಾರಿ ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಪ್ರಯತ್ನಿಸುತ್ತಿದ್ದಾರೆ ಎಂದಿರುವ ಕಾಂಗ್ರೆಸ್, "ಸದ್ಯಕ್ಕೆ ನಡೆಯುತ್ತಿರುವ ಕೋರ್ಟ್ ವಿಚಾರಣೆಯನ್ನು ನಿಲ್ಲಿಸುವುದೇ ಅವರ ನಿಜ ಉದ್ದೇಶ" ಎಂದು ಆರೋಪಿಸಿದೆ.

"ಆರ್ ಎಸ್ ಎಸ್ ನಂತೆ, ಸೋನಿಯಾ ಗಾಂಧಿ ಆಗಲೀ ಅಥವಾ ರಾಹುಲ್ ಗಾಂಧಿ ಆಗಲೀ ಗೃಹ ಸಚಿವ ಪಿ ಚಿದಂಬರಂ ಅವರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಾಗಲಿ ಅಥವಾ ಸಲಹೆ ನೀಡುವುದನ್ನಾಗಲೀ ಮಾಡುತ್ತಿರಲಿಲ್ಲ. ಇಶ್ರತ್ ಜಹಾನ್ ಪ್ರಕರಣ ಸಂಬಂಧ ಯಾವುದೇ ವ್ಯಕ್ತಿಗಾಗಲಿ, ಅಧಿಕಾರಿಗಾಗಲಿ ಅವರು ಎಂದಿಗೂ ನಿರ್ದೇಶನ ನೀಡುತ್ತಿರಲಿಲ್ಲ" ಎಂದು ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ವಿರುದ್ಧ ಹರಿಹಾಯ್ದಿರುವ ಸುರ್ಜೇವಾಲ "ತಮ್ಮ ಆಪ್ತರನ್ನು ಆಟದ ಕಾಯಿಗಳಂತೆ ಬಳಸಿ ಸುಳ್ಳಿನ ಕಂತೆ ಹಬ್ಬಿಸುವುದನ್ನು ಪ್ರಧಾನಿ ನರೇಂದ್ರ ಮೋದಿ ನಿಲ್ಲಿಸಬೇಕು" ಎಂದಿದ್ದಾರೆ.

ದೇಶದ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಈ ಪಿತೂರಿ ಹೂಡಲಾಗಿದೆ. ಆದರೆ ಸತ್ಯವನ್ನು ಮುಚ್ಚಿಹಾಕಲು ಅಮಿತ್ ಷಾ ಅಥವಾ ಮೋದಿ ಅವರಿಗೆ ಸಾಧ್ಯವಿಲ್ಲ ಎಂದಿರುವ ಸುರ್ಜೇವಾಲ "ಈಗ ನ್ಯಾಯಾಂಗದಲ್ಲಿರುವ ಇಶ್ರತ್ ಜಹಾನ್ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವ ನಿಜ ಹುನ್ನಾರದ ಬಗ್ಗೆ ದೇಶದ ೧೨೫ ಕೋಟಿ ಜನತೆಗೆ ಮೋದಿ ಮತ್ತು ಷಾ ವಿವರಣೆ ನೀಡಬೇಕಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ವಕ್ತಾರ ಹೆಣೆದಿರುವ ಸುಳ್ಳಿನ ಕಂತೆಯಿಂದ ಸತ್ಯ ಮತ್ತು ನ್ಯಾಯಕ್ಕೆ ಧಕ್ಕೆಯಾಗಬಾರದು" ಎಂದಿದ್ದಾರೆ.

ಇಶ್ರತ್ ಜಹಾನ್ ಮತ್ತು ಮೂರು ಸಹಚರರನ್ನು ಎಲ್ ಇ ಟಿ ಉಗ್ರಗಾಮಿ ಸಂಘಟನೆಯ ಏಜೆಂಟ್ ಗಳೆಂದು ಬಗೆದು ಅಹಮದಾಬಾದ್ ಪೊಲೀಸರು ಜೂನ್ ೧೫ ೨೦೧೪ರಂದು ಎನ್ ಕೌಂಟರ್ ನಲ್ಲಿ ಕೊಂದುಹಾಕಿದ್ದರು.

ಇದು ನಕಲಿ ಎನ್ ಕೌಂಟರ್ ಎಂದು ಮೆಟ್ರೋಪಾಲಿಟನ್ ನ್ಯಾಯಾಲಯ, ಗುಜರಾತ್ ಹೈಕೋರ್ಟ್ ನ ಅಹಮದಾಬಾದ್ ಮತ್ತು ವಿಭಾಗೀಯ ನ್ಯಾಯಪೀಠ ಎತ್ತಿ ಹಿಡಿದಿರುವ "ನ್ಯಾಯಾಂಗ ತನಿಖೆಯ ಮಾಹಿತಿಗಳನ್ನು ಪ್ರಧಾನಿ ಮತ್ತು ಷಾ ಕಡೆಗಣಿಸುತ್ತಿರುವುದೇಕೆ" ಎಂದು ಕೂಡ ಸುರ್ಜೇವಾಲ ಪ್ರಶ್ನಿಸಿದ್ದಾರೆ.

"ಕಾಂಗ್ರೆಸ್ ಉಗ್ರಗಾಮಿಗಳನ್ನು ಸಹಿಸಿಕೊಳ್ಳುತ್ತದೆ ಆದರೆ ನರೇಂದ್ರ ಮೋದಿ ಪ್ರಧಾನಿ ಆಗಿರುವುದನ್ನಲ್ಲ" ಎಂದು ದೂಷಿಸಿದ್ದ ಬಿಜೆಪಿ, ಚಿದಂಬರಮ್ ಅವರಿಗೆ ಇಶ್ರತ್ ಜಹಾನ್ ಪ್ರಕರಣದಲ್ಲಿ ಎರಡನೇ ಅಫಿಡೆವಿಟ್ ಸಲ್ಲಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚಿಸಿದ್ದರು ಎಂದು ಆರೋಪಿಸಿತ್ತು. "ಇಶ್ರತ್ ಜಹಾನ್ ಎಲ್ ಇ ಟಿ ಏಜೆಂಟ್ ಮತ್ತು ಅವರು ನರೇಂದ್ರ ಮೋದಿ ಜೀವಕ್ಕೆ ಅಪಾಯ ಎಂಬ ಮಾಹಿತಿಯನ್ನು ಬದಲಿಸಿ ಸಲ್ಲಿಸಿದ್ದ ಎರಡನೇ ಅಫಿಡವಿಟ್ ನ ಹಿಂದಿನ ಕೈವಾಡದ ಮೂಲ ಪುರುಷರನ್ನು ಚಿದಂಬರಂ ಹೆಸರಿಸಬೇಕು" ಎಂದು ಸಂಬಿತ್ ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT