ಪ್ರಧಾನ ಸುದ್ದಿ

"ಅಮೆರಿಕದ ವಿಧ್ವಂಸಕ "ಎಫ್-16" ಯುದ್ಧ ವಿಮಾನವನ್ನು ಭಾರತದಲ್ಲಿ ನಿರ್ಮಾಣ ಮಾಡಲು ಸಿದ್ಧ"

Srinivasamurthy VN

ನವದೆಹಲಿ: ಅಮೆರಿಕ ಸೇನೆಯ ವಿಧ್ವಂಸಕ ಯುದ್ಧ ವಿಮಾನ ಎಫ್-16 ಅನ್ನು ಭಾರತದಲ್ಲಿಯೇ ತಾನು ನಿರ್ಮಾಣ ಮಾಡಲು ಸಿದ್ಧ ಎಂದು ಯುದ್ಧ ವಿಮಾನ ನಿರ್ಮಾಣ ಸಂಸ್ಥೆ ಲಾಕ್ಹೀಡ್ ಮಾರ್ಟಿನ್  ಘೋಷಣೆ ಮಾಡಿದೆ.

ಅಮೆರಿಕದ ಟೆಕ್ಸಾಸ್ ನಲ್ಲಿ ಯುದ್ಧವಿಮಾನ ತಯಾರಿಕಾ ಘಟಕವನ್ನು ಹೊಂದಿರುವ ಲಾಕ್ ಹೀಡ್ ಮಾರ್ಟಿನ್ ಸಂಸ್ಥೆ ತನ್ನ ಭಾರತದಲ್ಲಿ ತನ್ನ ಘಟಕ ಸ್ಥಾಪನೆಗೆ ಸಿದ್ಧ ಎಂದು ಘೋಷಣೆ ಮಾಡಿದೆ.  ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಲಾಕ್ ಹೀಡ್ ಮಾರ್ಟಿನ್ ಸಂಸ್ಥೆಯ ವಾಣ್ಯಿಜ್ಯಾಭಿವೃದ್ಧಿ ಮುಖ್ಯಸ್ಥ ರ್ಯಾಂಡಲ್ ಎಲ್ ಹಾವರ್ಡ್ ಅವರು ಗುರುವಾರ ಈ ಬಗ್ಗೆ ಮಾತನಾಡಿದ್ದು, ಭಾರತದ  ನೆಲದಲ್ಲಿ ಮತ್ತು ಭಾರತದ ಅವಶ್ಯಕತೆಗಳಿಗನುಗುಣವಾಗಿ ಎಫ್ -16 ಯುದ್ಧ ವಿಮಾನವನ್ನು ಭಾರತದಲ್ಲಿಯೇ ತಯಾರು ಮಾಡಲು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ.

ಭಾರತ ಭೇಟಿ ವೇಳೆ ಹಿರಿಯ ಸೇನಾಧಿಕಾರಿಗಳನ್ನು ಮತ್ತು ರಕ್ಷಣಾ ಇಲಾಖೆಯ ಅಧಿಕಾರಿಗಳು ಭೇಟಿ ಮಾಡಿದ ಹಾವರ್ಡ್ ಅವರು ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ.  ಪ್ರಮುಖವಾಗಿ ಎಫ್-16 ಯುದ್ಧ ವಿಮಾನದ ತಯಾರಿಕ ಘಟಕವನ್ನು ಭಾರತದಲ್ಲಿ ಸ್ಥಾಪಿಸುವ ಕುರಿತು ಹಾವರ್ಡ್ ಮಾತುಕತೆ ನಡೆಸಿದ್ದು, ಭಾರತ ಕೂಡ ಇದಕ್ಕೆ ಪರೋಕ್ಷ ಸಮ್ಮತಿ ನೀಡಿದೆ  ಎಂದು ತಿಳಿದುಬಂದಿದೆ. ಆದರೆ ಇದಕ್ಕೆ ಕೇಂದ್ರ ಸರ್ಕಾರ ಹಾಗೂ ಸೇನಾಪಡೆಯ ಅಧಿಕಾರಿಗಳು ಹಲವು ಷರತ್ತುಗಳನ್ನು ವಿಧಿಸಿದ್ದು, ಬಹುತೇಕ ಷರತ್ತುಗಳಿದೆ ಲಾಕ್ ಹೀಡ್ ಮಾರ್ಟಿನ್ ಸಂಸ್ಥೆ  ಒಪ್ಪಿಗೆ ನೀಡಿದೆ ಮತ್ತು ತನ್ನ ಕೆಲ ಷರತ್ತುಗಳನ್ನು ಕೂಡ ಸರ್ಕಾರದ ಮುಂದಿರಿಸಿದೆ ಎಂದು ತಿಳಿದುಬಂದಿದೆ.

ಇನ್ನು ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಮುಂದಿಟ್ಟಿರುವ ಶರತ್ತುಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಸಕಾರಾತ್ಮಕ ತೀರ್ಮಾನ ಕೈಗೊಳ್ಳುವ ಭರವಸೆ ಸರ್ಕಾರದಿಂದ ಸಿಕ್ಕಿದೆ. ಪಾಕಿಸ್ತಾನಕ್ಕೆ ಎಫ್-16 ನೀಡದಿರುವ ಬದ್ಧತೆ ಏನಾದರು ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಹಾವರ್ಡ್ ಅವರು, ಈ ವಿಚಾರ ಅಮೆರಿಕ ಹಾಗೂ ಭಾರತ ಸರ್ಕಾರಕ್ಕೆ ಸಂಬಂಧಪಟ್ಟ  ವಿಚಾರವಾಗಿದೆ. ಹೀಗಾಗಿ ನಾವು ಈ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯತೆ ಇಲ್ಲ ಎಂದು ಹೇಳಿದ್ದಾರೆ.

ಮತ್ತೊಂದು ಪ್ರಬಲ ಯುದ್ಧ ವಿಮಾನಕ್ಕಾಗಿ ಭಾರತ ಶೋಧ: ಪರಿಹಾರವಾಗೀತೆ ಎಫ್-16?
ಇನ್ನು ಸ್ವದೇಶಿ ನಿರ್ಮಿತ ತೇಜಸ್, ಸುಖೋಯ್, ಮಿಗ್-29, ಡಸಾಲ್ಟ್ ಮಿರಾಜ್ 2000, ಮಿಗ್-21, ಜಾಗ್ವಾರ್ ನಂತಹ ಪ್ರಬಲ ಯುದ್ಧ ವಿಮಾನಗಳಿದ್ದರೂ, ಭಾರತೀಯ ವಾಯು ಸೇನೆಗೆ  ಮತ್ತೊಂದು ಪ್ರಬಲ ಯುದ್ಧ ವಿಮಾನದ ಕೊರತೆ ಕಾಣುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದೇ ಕಾರಣಕ್ಕೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ನೇತೃತ್ವದ ಕೇಂದ್ರ ರಕ್ಷಣಾ  ಇಲಾಖೆ ಪ್ರಬಲ ಯುದ್ಧ ವಿಮಾನಕ್ಕೆ ಶೋಧ ನಡೆಸಿದತ್ತು. ಇದೇ ವೇಳೆ ಎಫ್-16 ನಿರ್ಮಾಣ ಸಂಸ್ಥೆ ಭಾರತದಲ್ಲಿ ತನ್ನ ಘಟಕ ಆರಂಭಿಸಲು ಮುಂದಾಗಿದೆ. ಲಾಕ್ ಹೀಡ್ ಮಾರ್ಟಿನ್ ಘಟಕ  ಸ್ಥಾಪನೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾಗೆ ಒತ್ತು ನೀಡಿದಂತೆಯೂ ಇರುತ್ತದೆ ಹಾಗೂ ಭಾರತೀಯ ವಾಯು ಸೇನೆಯ ಕೊರತೆ ಕೂಡ  ನೀಗುತ್ತದೆ ಎಂಬ ಕಾರಣಕ್ಕೆ ಎಫ್-16 ನಿರ್ಮಾಣ ಸಂಸ್ಥೆಗೆ ಕೇಂದ್ರ ಸರ್ಕಾರ ಘಟಕ ಸ್ಥಾಪನೆಗೆ ಷರತ್ತು ಬದ್ಧ ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ.

ವಿಶ್ವಾದ್ಯಂತ ಈಗಾಗಲೇ ಸುಮಾರು 4,588 ಎಫ್ 16 ಯುದ್ಧ ವಿಮಾನವನ್ನು ಮಾರಾಟ ಮಾಡಿರುವ ಲಾಕ್ ಹೀಡ್ ಮಾರ್ಟಿನ್ ಸಂಸ್ಥೆಗೆ ವಿವಿಧ ಯುದ್ಧ ವಿಮಾನ ತಯಾರಿಕಾ ಸಂಸ್ಥೆಗಳಿಂದ ತೀವ್ರ  ಪೈಪೋಟಿ ಇದ್ದು, ಪ್ರಮುಖವಾಗಿ ಅಮೆರಿಕದ ಬೋಯಿಂಗ್, ಫ್ರಾನ್ಸ್ ನ ಡಸಾಲ್ಟ್ ಏವಿಯೇಷನ್(ಭಾರತಕ್ಕೆ ರಾಫೆಲ್ ಯುದ್ಧ ವಿಮಾನ ನೀಡುತ್ತಿರುವ ಸಂಸ್ಥೆ), ಸ್ವೀಡನ್ ಮೂಲದ ಗ್ರಿಪೆನ್ ಹಾಗೂ  ಯೂರೋ ಫೈಟರ್ ಸಂಸ್ಥೆಗಳು ತೀವ್ರ ಪೈಪೋಟಿ ನೀಡುತ್ತಿವೆ. ಅಲ್ಲದೆ ತಾವೂ ಕೂಡ ಭಾರತದಲ್ಲಿ ಯುದ್ಧ ವಿಮಾನ ಘಟಕ ಆರಂಭಿಸಲು ಉತ್ಸುಕರಾಗಿರುವುದಾಗಿ ಹೇಳಿದ್ದು, ಭಾರತಕ್ಕೆ ಹಲವು  ಆಫರ್ ಗಳನ್ನು ನೀಡಿವೆ. ಯುದ್ಧ ವಿಮಾನ ಸಂಸ್ಥೆಗಳ ಈ ಪೈಪೋಟಿಯನ್ನು ಲಾಭ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಯೋಚಿಸುತ್ತಿದ್ದು, ಇದೇ ಕಾರಣಕ್ಕೆ ಭಾರತದಲ್ಲಿ ಘಟಕ ಸ್ಥಾಪನೆಗೆ  ಮುಂದಾಗಿರುವ ಲಾಕ್ ಹೀಡ್ ಮಾರ್ಟಿನ್ ಸಂಸ್ಥೆಗೆ ಭಾರತ ಹಲವು ಷರತ್ತುಗಳನ್ನು ವಿಧಿಸಿದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಎಫ್-16 ನಿರ್ಮಾಣ ಅಗ್ಗ?
ಭಾರತದಲ್ಲಿ ಘಟಕ ಸ್ಥಾಪನೆಗೆ ಮುಂದಾಗಿರುವ ಲಾಕ್ ಹೀಡ್ ಮಾರ್ಟಿನ್ ಸಂಸ್ಥೆಯ ನಿರ್ಧಾರದ ಹಿಂದೆಯೂ ಲಾಭದ ಉದ್ದೇಶವಿದ್ದು, ಪ್ರಮುಖವಾಗಿ ಅಮೆರಿಕದಲ್ಲಿ ತಯಾರಾಗುವ ಎಫ್-16  ಯುದ್ಧ ವಿಮಾನದ ದರ ಭಾರತದಲ್ಲಿ ಶೇ.12ರಿಂದ 14ರಷ್ಟು ಇಳಿಕೆಯಾಗುತ್ತದೆ. ಭಾರತದಲ್ಲಿ ಘಟಕ ಸ್ಥಾಪನೆ ಮಾಡಿ ಅದಕ್ಕೆ ಬೇಕಾದ ಕಚ್ಛಾವಸ್ತುಗಳನ್ನು ರುಪಾಯಿ ದರದಲ್ಲಿ ಸಂಸ್ಥೆ ಖರೀದಿ  ಮಾಡಲಿದೆ. ಆದರೆ ಯುದ್ಧ ವಿಮಾನ ತಯಾರಾದ ಬಳಿಕ ಅದನ್ನು ಡಾಲರ್ ಲೆಕ್ಕದಲ್ಲಿ ಮಾರಾಟ ಮಾಡುತ್ತದೆ. ಇದರಿಂದ ವಿಮಾನದ ತಯಾರಿಕಾ ವೆಚ್ಚದಲ್ಲಿ ಸಾಕಷ್ಚ ಪ್ರಮಾಣದ  ಉಳಿಕೆಯಾಗುತ್ತದೆ. ಅಲ್ಲದೆ ವಿಮಾನ ತಯಾರಿಕೆಗೆ ಬೇಕಾದ ಪೂರಕ ವಾತಾವರಣ ಹಾಗೂ ಮೂಲಭೂತ ಸೌಕರ್ಯವಿರುವುದರಿಂದ ಲಾಕ್ ಹೀಡ್ ಮಾರ್ಟಿನ್ ಸಂಸ್ಥೆ ಭಾರತದಲ್ಲಿಯೇ ತನ್ನ  ಘಟಕ ಸ್ಥಾಪನೆಗೆ ಮುಂದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 

SCROLL FOR NEXT