ಶಾದ್ ನಗರ: ತೆಲಂಗಾಣದ ಶಾದ್ ನಗರದಲ್ಲಿ ಪೊಲೀಸರು ಹಾಗೂ ಗ್ಯಾಂಗ್ ಸ್ಟರ್ ಗಳ ನಡುವೆ ನಡುವೆ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಗ್ಯಾಂಗ್ ಸ್ಟರ್ ಗಳನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.
ಶಾದ್ ನಗರದ ಮಿಲೇನಿಯಂ ಟೌನ್ ಶಿಪ್ ಬಳಿ ಈ ಘಟನೆ ನಡೆದಿದ್ದು, ಈ ವಗೆಗಿನ ಮಾಹಿತಿ ಪ್ರಕಾರ ಎನ್ ಕೌಂಟರ್ ಗೆ ಬಲಿಯಾಗಿರುವ ಓರ್ವನನ್ನು, ಆಂಧ್ರ ಪ್ರದೇಶದ ಹಾಗೂ ತೆಲಂಗಾಣದ ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ ಗಳ ಪಟ್ಟಿಯಲ್ಲಿದ್ದ ನಯೀಮ್ ಎಂದು ಗುರುತಿಸಲಾಗಿದೆ.
ಎನ್ ಕೌಂಟರ್ ನಲ್ಲಿ ಹತ್ಯೆಗೀಡಾಗಿರುವ ನಯೀಮ್ ನಕ್ಸಲ್ ಚಟುವಟಿಕೆಗಳಲ್ಲೂ ಭಾಗಿಯಾಗಿದ್ದ ಬಗ್ಗೆ ಮಾಹಿತಿ ಇದೆ. ಎನ್ ಕೌಂಟರ್ ನಡೆಸುವುದಕ್ಕೂ ಮುನ್ನ ಪೊಲೀಸರು ನಯೀಮ್ ಹಾಗೂ ಆತನ ಸಹಚರರಿಗೆ ಶರಣಾಗುವಂತೆ ಸೂಚಿಸಿದ್ದರು. ಆದರೆ ಇದಕ್ಕೆ ನಿರಾಕರಿಸಿದ ನಯೀಮ್ ಮತ್ತು ಸಹಚರರು ಪೊಲೀಸರತ್ತ ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ.
ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ ಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆಯೇ ಭದ್ರತೆಯೊಂದಿಗೆ ಪೊಲೀಸರು ದಾಳಿ ನಡೆಸಿದ್ದಾರೆ. ಇನ್ನು ಹೈದರಾಬಾದ್ ನ ಹೊರಭಾಗದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಎನ್ಐಎ ಹಾಗೂ ತೆಲಂಗಾಣ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.