ಪ್ರಧಾನ ಸುದ್ದಿ

ಹುತಾತ್ಮ ಯೋಧ ಕನ್ನಡಿಗ ನಿರಂಜನ್ ಕುಮಾರ್ಗೆ 'ಶೌರ್ಯ ಚಕ್ರ' ಗೌರವ

Vishwanath S

ನವದೆಹಲಿ: ಕಳೆದ ಜನವರಿ 1 ರಂದು ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರ ದಾಳಿಯಲ್ಲಿ ಹುತಾತ್ಮರಾಗಿದ್ದ ಕನ್ನಡಿಗ ಯೋಧ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಅವರಿಗೆ ಕೇಂದ್ರ ಸರ್ಕಾರ ಶೌರ್ಯ ಚಕ್ರ ಪುರಸ್ಕಾರ ನೀಡಿದೆ.

70ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರವು ಸೋಮವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅಭೂತ ಪೂರ್ವ ಶೌರ್ಯ ಮೆರೆದ ಸೇನಾ ಪಡೆ ಮತ್ತು ಅರೆ ಸೇನಾ ಪಡೆಯ ಯೋಧರಿಗೆ 82 ಶೌರ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಿದ್ದು, 1 ಅಶೋಕ ಚಕ್ರ, 14 ಶೌರ್ಯ ಚಕ್ರ, 63 ಸೇನಾ ಪದಕ, 2 ನೌ ಸೇನಾ ಪದಕ ಮತ್ತು 2 ವಾಯು ಸೇನಾ ಪದಕ ಒಳಗೊಂಡಿದೆ.

ರಾಷ್ಟ್ರೀಯ ಭದ್ರತಾ ಪಡೆ(ಎನ್ಎಸ್ಜಿ) ಕಮಾಂಡೋ ಪಡೆಯ ಬಾಂಬ್ ನಿಷ್ಕ್ರಿಯ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಿರಂಜನ್ ಕುಮಾರ್ ಅವರು ಪಠಾಣ್ ಕೋಟ್ ವಾಯುನೆಲೆಯಲ್ಲಿ ಉಗ್ರರು ಅಡಗಿಸಿಟ್ಟಿದ್ದ ಗ್ರೆನೇಡ್ ಸ್ಫೋಟಗೊಂಡ ಪರಿಣಾಮ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಮಗನಿಗೆ ಶೌರ್ಯ ಚಕ್ರ ಗೌರವ, ಹರ್ಷ ವ್ಯಕ್ತಪಡಿಸಿದ ತಾಯಿ
ನಿರಂಜನ್ ಕುಮಾರ್ ಅವರಿಗೆ ಶೌರ್ಯ ಚಕ್ರ ನೀಡುತ್ತಿರುವ ಕೇಂದ್ರ ಸರ್ಕಾರಕ್ಕೆ ನಿರಂಜನ್ ತಾಯಿ ರಾಧಾ ಶಿವರಾಜನ್ ಧನ್ಯವಾದಗಳನ್ನು ತಿಳಿಸಿದ್ದಾರೆ. ಶೌರ್ಯ ಚಕ್ರ ಪ್ರಶಸ್ತಿ ನೀಡುವ ಮೂಲಕ ನಿರಂಜನ್ ಕುಮಾರ್ ರನ್ನು ಜೀವಂತವಾಗಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

SCROLL FOR NEXT