ಬಲೂಚಿಸ್ಥಾನ ಮುಖಂಡರ ಬಂಧನ; ಪ್ರಧಾನಿ ಮೋದಿಗೆ ಶಿವಸೇನೆ ಕುಚೋದ್ಯ
ಮುಂಬೈ: ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಬಲೂಚಿಸ್ಥಾನದ ಹೋರಾಟದ ಬಗ್ಗೆ ಪ್ರಸ್ತಾಪಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ಮೈತ್ರಿ ಪಕ್ಷ ಶಿವಸೇನೆ, ಈಗ ನಿಮ್ಮ ಪ್ರತಿಕ್ರಿಯೆಗಳನ್ನು ಸಮರ್ಥಿಸಿಕೊಂಡ ಬಲೂಚಿ ಮುಖಂಡರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿದ್ದು ಅವರನ್ನು ರಕ್ಷಿಸಲು ಸೇನೆಯನ್ನು ಕಳುಸಿವಿರೇ ಎಂದು ಪ್ರಶ್ನಿಸದೆ.
ಬಲೂಚಿಸ್ಥಾನದ ಹೋರಾಟವನ್ನು ಬೆಂಬಲಿಸಿದ ನರೇಂದ್ರ ಮೋದಿ ಮಾತುಗಳನ್ನು ಸಮರ್ಥಿಸಕೊಂಡದ್ದಕ್ಕೆ ದೇಶದ್ರೋಹ ಆರೋಪವೂ ಸೇರಿದಂತೆ ಮೂವರು ಬಲೂಚ್ ರಾಷ್ಟ್ರವಾದಿ ಮುಖಂಡರ ಮೇಲೆ ಪಾಕಿಸ್ತಾನದಲ್ಲಿ ಐದು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
"ಪ್ರಧಾನಿ ಮೋದಿ ಅವರನ್ನು ಬೆಂಬಲಿಸಿ ಬಲೂಚ್ ಮುಖಂಡರು ದೊಡ್ಡ ಬೆಲೆ ತೆತ್ತಿದ್ದಾರೆ. ಅವರ ವಿರುದ್ಧ ಪಾಕಿಸ್ತಾನದ ವಿರುದ್ಧ ಯುದ್ಧ ಹೂಡುವ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಪಾಕಿಸ್ತಾನದ ದಬ್ಬಾಳಿಕೆಯ ವ್ಯಕ್ತಿತ್ವದ ಭಾಗವಾಗಿದೆ ಇದು" ಎಂದು ಸೇನಾ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಹೇಳಲಾಗಿದೆ.
"ಈಗ ಅವರ ಬೆಂಬಲಕ್ಕೆ ನಮ್ಮ ಪ್ರಧಾನಿ ಏನು ಮಾಡಲಿದ್ದಾರೆ? ಪಾಕಿಸ್ತಾನದಿಂದ ಬಲೂಚ್ ಮುಖಂಡರನ್ನು ರಕ್ಷಿಸಲು ಸೇನೆಯನ್ನು ಕಳುಹಿಸಲಿದ್ದಾರೆಯೇ? ಅಥವಾ ಅವರ ವಿರುದ್ಧದ ಪಾಕಿಸ್ತಾನದ ಕ್ರಮವನ್ನು ಖಂಡಿಸಿ ಭಾಷಣ ಮಾಡಲಿದ್ದಾರೆಯೇ? ಪ್ರಧಾನಿ ಮೋದಿ ಅವರ ಭಾಷಣ ಬೆಂಬಲಿಸಿದ್ದಕ್ಕಾಗಿಯೇ ಈ ಮುಖಂಡರು ತೊಂದರೆ ಅನುಭವಿಸುತ್ತಿದ್ದಾರೆ" ಎಂದು ಕೂಡ ಸಂಪಾದಕೀಯ ಹೇಳಿದೆ.
ಹಾಗೆಯೇ ಕಾಶ್ಮೀರದಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುವಿರಿ ಎಂದು ಕೂಡ ಸೇನೆ ಮೋದಿಯವರನ್ನು ಪ್ರಶ್ನಿಸಿದೆ.
ಕಣಿವೆಯಲ್ಲಿ ಪರಿಸ್ಥಿತಿ ಸುಧಾರಿಸಲು ಹುರಿಯತ್ ಜೊತೆಗೆ ಮಾತುಕತೆ ನಡೆಸಬೇಕು ಎನ್ನುವ ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ನಡೆಯು ತಪ್ಪು ಎಂದು ಬಿಜೆಪಿ ಮೈತ್ರಿ ಪಕ್ಷ ಹೇಳಿದೆ.
ಆಗಸ್ಟ್ 15 ರಂದು ದೆಹಲಿಯ ಕೆಂಪು ಕೋಟೆಯ ಮೇಲೆ ಮೋದಿ ಮಾಡಿದ ಐತಿಹಾಸಿಕ ಭಾಷಣದಲ್ಲಿ, ಬಲೂಚಿಸ್ಥಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ದೇಶ ನಡೆಸಿದ ದೌರ್ಜನ್ಯಗಳನ್ನು ಗಮನಕ್ಕೆ ತಂದಿದ್ದಕ್ಕೆ ಬಲೂಚಿಸ್ಥಾನದ ಜನರಿಗೆ ಅಭಿನಂದಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ ಬಲೂಚಿಸ್ಥಾನದ ಬಗ್ಗೆ ಮಾತನಾಡಿ ಮೋದಿ ಕೆಂಪುಗೆರೆ ದಾಟಿದ್ದಾರೆ ಈಗ ಮುಂದಿನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಷಯವನ್ನು ಬಲವಂತವಾಗಿ ಎತ್ತಲಿದ್ದೇವೆ ಎಂದಿತ್ತು.
"ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ದಂಗೆಗೆ ಭಾರತ ಸರ್ಕಾರ ಸಂಪೂರ್ಣ ಬೆಂಬಲ ನೀಡಿದೆ" ಎಂದು ಬಲೂಚಿಸ್ಥಾನದ ಮುಖ್ಯಮಂತ್ರಿ ಸನಾವುಲ್ಲಾ ಜೋಹರಿ ಕಳೆದ ವಾರ ದೂರಿದ್ದರು.