ಪ.ಬಂಗಾಳದಲ್ಲಿ ಸೇನೆ ನಿಯೋಜನೆ; ಸಂಸತ್ತಿನ ಉಭಯ ಕಲಾಪದಲ್ಲಿ ಕೋಲಾಹಲ!
ನೋಟು ನಿಷೇಧ ಗದ್ದಲದ ನಡುವೆಯೇ ಸಂಸತ್ತಿನ ಉಭಯ ಕಾಲಪದಲ್ಲಿ ಪಶ್ಚಿಮ ಬಂಗಾಳದಲ್ಲಿ ಸೇನೆ ನಿಯೋಜನೆ ವಿಚಾರ ಗದ್ದಲಕ್ಕೆ ಕಾರಣವಾಗಿದ್ದು, ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಟಿಎಂಸಿ ಮತ್ತು ಬಿಎಸ್ ಪಿ ಸೇರಿದಂತೆ ಪ್ರಮುಖ ವಿಪಕ್ಷಗಳು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ.
ನವದೆಹಲಿ: ನೋಟು ನಿಷೇಧ ಗದ್ದಲದ ನಡುವೆಯೇ ಸಂಸತ್ತಿನ ಉಭಯ ಕಾಲಪದಲ್ಲಿ ಪಶ್ಚಿಮ ಬಂಗಾಳದಲ್ಲಿ ಸೇನೆ ನಿಯೋಜನೆ ವಿಚಾರ ಗದ್ದಲಕ್ಕೆ ಕಾರಣವಾಗಿದ್ದು, ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಟಿಎಂಸಿ ಮತ್ತು ಬಿಎಸ್ ಪಿ ಸೇರಿದಂತೆ ಪ್ರಮುಖ ವಿಪಕ್ಷಗಳು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ.
ಅತ್ತ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವವರೆಗೂ ತಾವು ಕಚೇರಿ ಬಿಟ್ಟು ಬರುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಟ್ಟು ಹಿಡಿದಿರುವಂತೆಯೇ ಇತ್ತ ದೆಹಲಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಟಿಎಂಸಿ, ಬಿಎಸ್ ಪಿ ಸೇರಿದಂತೆ ವಿಪಕ್ಷಗಳು ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ. ಈ ಬಗ್ಗೆ ಲೋಕಸಭೆಯಲ್ಲಿ ವಿಚಾರ ಮಂಡಿಸಿದ ಟಿಎಂಸಿ ಸಂಸದ ಡೆರಿಕ್ ಒಬ್ರಿಯಾನ್ ಅವರು, ನೋಟು ನಿಷೇಧ ವಿರೋಧಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಹಣಿಯಲು ಕೇಂದ್ರ ಸರ್ಕಾರ ಮುಂದಾಗಿದೆ. ಇದೇ ಕಾರಣಕ್ಕಾಗಿ ಸರ್ಕಾರದ ಗಮನಕ್ಕೆ ತರದೇ ರಾಜ್ಯದಲ್ಲಿ ಸೇನೆಯನ್ನು ನಿಯೋಜಿಸಿದೆ. ವ್ಯಾಪಕ ವಿರೋಧದ ನಡುವೆಯೂ ಸುಮಾರು 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ ಎಂದು ಅವರು ಕಿಡಿಕಾರಿದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು, ಕೇಂದ್ರಸರ್ಕಾರದ ನಡೆ ನಿಜಕ್ಕೂ ಖಂಡನೀಯವಾದದ್ದು. ನೋಟು ನಿಷೇಧದ ವಿರುದ್ಧ ಧನಿ ಎತ್ತಿದರು ಎಂಬ ಕಾರಣಕ್ಕೆ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕೇಂದ್ರ ಸರ್ಕಾರದ ನಡೆ ಸರಿಯಾದುದಲ್ಲ. ಇದನ್ನು ಬಹುಜನ ಸಮಾಜವಾದಿ ಪಕ್ಷ ಖಂಡಿಸುತ್ತದೆ. ಕೇಂದ್ರ ಸರ್ಕಾರದ ನಡೆ ಸಂವಿಧಾನಬದ್ಧ ಅಧಿಕಾರಿದ ಮೇಲಿನ ಹಲ್ಲೆ ಎಂದು ಮಾಯಾವತಿ ಬಣ್ಣಿಸಿದರು.
ರಾಜ್ಯಸಭೆಯಲ್ಲೂ ಸೇನೆ ನಿಯೋಜನೆ ವಿರುದ್ಧ ಕೂಗು
ಇದೇ ವೇಳೆ ರಾಜ್ಯಸಭೆಯಲ್ಲೂ ಸೇನೆ ನಿಯೋಜನೆ ಕುರಿತಂತೆ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಮುಖಂಡ ಗುಲಾಂ ನಭಿ ಅಜಾದ್ ಅವರು ಕೇಂದ್ರ ಸರ್ಕಾರ ಈ ಬಗ್ಗೆ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. ಪಶ್ಚಿಮ ಬಂಗಾಳದಲ್ಲೇನೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿಲ್ಲ. ಹೀಗಿದ್ದೂ ಆ ರಾಜ್ಯಕ್ಕೆ ಸೇನೆ ನಿಯೋಜಿಸಿದ್ದು ಏಕೆ? ಪಶ್ಚಿಮ ಬಂಗಾಳದ ಸೇನೆಯ ಅವಶ್ಯಕತೆಯಾದರೂ ಏನಿತ್ತು? ಎಂದು ಅಜಾದ್ ಪ್ರಶ್ನಿಸಿದ್ದಾರೆ.