ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಎಂ ವೆಂಕಯ್ಯ ನಾಯ್ಡು
ನವದೆಹಲಿ: ಭಾರತದ ಖೋಟಾ ನೋಟುಗಳ ಕಳ್ಳ ಸಾಗಾಣಿಕೆ ಗಣನೀಯವಾಗಿ ಇಳಿಮುಖವಾಗಿದೆ ಎಂದು ಕೇಂದ್ರ ಸಚಿವ ಎಂ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಇದು ೨೦೧೫ ರಲ್ಲಿ ೪೪ ಕೋಟಿ ರೂ ಇದ್ದರೆ, ಸದರಿ ವರ್ಷದಲ್ಲಿ ೨೮ ಕೋಟಿಗೆ ಇಳಿದಿದೆ.
ಸರಣಿ ಟ್ವೀಟ್ ಮಾಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ, ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕೂಡ ಖೋಟಾ ನೋಟುಗಳ ಕಳ್ಳ ಸಾಗಾಣೆ ಕಡಿಮೆಯಾಗಿದೆ ಎಂದಿದ್ದಾರೆ.
"ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (ಎನ್ ಸಿ ಆರ್ ಬಿ) ತಿಳಿಸಿರುವಂತೆ ೨೦೧೫ ರಲ್ಲಿ ಖೋಟಾ ನೋಟುಗಳ ಕಳ್ಳಸಾಗಾಣಿಕೆ ೪೩.೮೩ ಕೋಟಿ ಇದ್ದು, ೨೦೧೬ ಕ್ಕೆ ೨೭.೨೦ ಕೋಟಿಗೆ ಇಳಿದಿದೆ" ಎಂದು ನಾಯ್ಡು ಹೇಳಿದ್ದಾರೆ.
ಬಿ ಎಸ್ ಎಫ್ ಮಾಹಿತಿಯನ್ನು ಕೂಡ ನೀಡಿರುವ ಅವರು "ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಖೋಟಾ ನೋಟಿನ ಕಳ್ಳಸಾಗಾಣೆ ಕಳೆದ ೮ ವರ್ಷಗಳಿಂದ ಏರುತ್ತಲೇ ಇತ್ತು. ಈಗ ೨೦೧೫ ರಲ್ಲಿ ಅದು ೨.೮೭ ಕೋಟಿ ಇದ್ದು, ೨೦೧೬ ಕ್ಕೆ ೧.೫೩ ಕೋಟಿಗೆ ಇಳಿದಿದೆ" ಎಂದು ವೆಂಕಯ್ಯ ಹೇಳಿದ್ದಾರೆ.
೫೦೦ ರು ಮತ್ತು ೧೦೦೦ ರು ನೋಟುಗಳನ್ನು ಹಿಂಪಡೆಯುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಜನ ವಿಶಾಲಹೃದಯಿಗಳಾಗಿ ಬೆಂಬಲಿಸಿದ್ದಾರೆ ಎಂದು ಕೂಡ ನಾಯ್ಡು ಹೇಳಿದ್ದಾರೆ.
"ಬಹುಬಳಕೆಯ ಗಾದೆಯನ್ನು ಪುನರುಚ್ಛಿಸುವುದಾದರೆ, ಸಂಶೋಧನೆಯ ತಾಯಿ ಅಗತ್ಯತೆ. ಯುವಕರು ಮತ್ತು ಡಿಜಿಟಲ್ ಸಾಕ್ಷರತಾ ಜನಕ್ಕೆ ಈಗ ದೇಶಬದಲಿಸುವ ಪಾತ್ರ ಸಿಕ್ಕಿದೆ... ಅವರು ಸಾಕ್ಷರರಲ್ಲದವರಿಗೆ, ಅರ್ಧ ಸಾಕ್ಷರರಿಗೆ ಮತ್ತು ಮಹಿಳೆಯರಿಗೆ ಹಣಕಾಸು ವ್ಯವಹಾರವನ್ನು ಮೊಬೈಲ್ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಮಾಡುವುದನ್ನು ಹೇಳಿಕೊಡಬಹುದು" ಎಂದು ನಾಯ್ಡು ಹೇಳಿದ್ದಾರೆ.