ಬೆಂಗಳೂರು: ತಮಿಳುನಾಡಿನಲ್ಲಿ ರಾಜ್ಯ ಸರ್ಕಾರಿ ಸ್ವಾಮ್ಯದ ಕೆಎಸ್ ಆರ್ ಟಿಸಿ ಬಸ್ ಗಳ ಮೇಲೆ ದಾಳಿಯಾದ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಿಂದ ತೆರಳುವ ಎಲ್ಲ ಬಸ್ ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಅತ್ತ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿರುವ ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ಚಿಕಿತ್ಸೆ ಮುಂದುವರೆದಿರುವಂತೆಯೇ ಇತ್ತ ಪರಿಸ್ಥಿತಿಯ ಲಾಭ ಪಡೆಯಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ತಿರುವಣ್ಣಾಮಲೈನಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು 2 ಕೆಎಸ್ ಆರ್ ಟಿಸಿ ಬಸ್ ಗಳ ಮೇಲೆ ಬಿಯರ್ ಬಾಟಲಿಗಳನ್ನು ಎಸೆದಿದ್ದಾರೆ. ಘಟನೆಯಲ್ಲಿ ಬಸ್ ಗಳ ಮುಂಬದಿ ಗ್ಲಾಸ್ ಸಂಪೂರ್ಣ ಚೂರಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರಿಗೆ ಮತ್ತು ಬಸ್ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಚೆನ್ನೈಗೆ ತೆರಳಿದ್ದ ಬಸ್ ಅಲ್ಲಿಂದ ಬೆಂಗಳೂರಿಗೆ ವಾಪಸಾಗುತ್ತಿತ್ತು. ಮಾರ್ಗ ಮಧ್ಯೆ ತಿರುವಣ್ಣಾಮಲೈ ಮಾರ್ಗವಾಗಿ ಬರುತ್ತಿದ್ದಾಗ ಬೈಕ್ ನಲ್ಲಿ ಬಂದ ನಾಲ್ಕು ಮಂದಿ ದುಷ್ಕರ್ಮಿಗಳು ಬಸ್ ಮೇಲೆ ಬಿಯರ್ ಬಾಟಲಿ ಎಸೆದಿದ್ದಾರೆ. ಪರಿಣಾಮ ಎರಡೂ ಬಸ್ ಗಳ ಗಾಜುಗಳು ಪುಡಿಪುಡಿಯಾಗಿದೆ. ಕೂಡಲೇ ಚಾಲಕ ಬಸ್ ಅನ್ನು ನೇರ ಸಮೀಪದ ಪೊಲೀಸ್ ಠಾಣೆಯತ್ತ ಕೊಂಡೊಯ್ದು ದೂರು ನೀಡಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.