ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಮೀಸಲಾತಿ ಕಲ್ಪಿಸುವ ಯಾವುದೇ ಪ್ರಸ್ತಾವನೆಗಳನ್ನು ಸರ್ಕಾರ ಪರಿಗಣಿಸಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ತಿಳಿಸಿದೆ.
ಸದ್ಯ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಮೀಸಲಾತಿ ಕಲ್ಪಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಾಮಾಜಿಕ ನ್ಯಾಯ ಖಾತೆಯ ರಾಜ್ಯ ಸಚಿವ ಕೃಷ್ಣ ಪಾಲ್ ಗುರ್ಜಾರ್ ಅವರು ಇಂದು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.
ಈ ಮುಂಚೆ ಸಹೋದ್ಯೋಗಿ ಸಚಿವ ರಾಮದಾಸ್ ಅತವಾಲೇ ಅವರು ಮೀಸಲಾತಿಯನ್ನು ಶೇ.50ರಿಂದ 75ಕ್ಕೆ ಏರಿಸಬೇಕು ಮತ್ತು ಈ ಹೆಚ್ಚುವರಿ ಶೇ.25ರಷ್ಟು ಮೀಸಲಾತಿಯನ್ನು ಆರ್ಥಿಕವಾಗಿ ಹಿಂದೂಳಿದ ಸಾಮಾನ್ಯ ವರ್ಗದವರಿಗೆ ನೀಡಬೇಕು ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸದ ಗುರ್ಜಾರ್ ಅವರು, ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ ಸಂವಿಧಾನದ ಪ್ರಕಾರ, ಸರ್ಕಾರಿ ಹುದ್ದೆ, ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಚುನಾವಣೆಯಲ್ಲಿ ಎಸ್ ಸಿ ಗೆ ಶೇ.15ರಷ್ಟು, ಎಸ್ ಟಿಗೆ ಶೇ,7.5 ಹಾಗೂ ಒಬಿಸಿಗೆ ಶೇ,27ರಷ್ಟು ಮೀಸಲಾತಿ ನೀಡಲಾಗುತ್ತಿದೆ.