ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹೊಸ ನೋಟುಗಳ ಪೂರೈಕೆಯಲ್ಲಿ ಅಭಾವವಾಗಿದೆ ಎಂದು ದೂರಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎದುರು ಕುಳಿತು ತೃಣಮೂಲ ಕಾಂಗ್ರೆಸ್ ಸಚಿವರು ಮತ್ತು ಶಾಸಕರು ಬುಧವಾರ ಪ್ರತಿಭಟನೆ ನಡೆಸಿದರು.
ಬ್ಯಾಂಕ್ ಅಧಿಕಾರಿಗಳ ಸಭೆಗೆ ಗುರುವಾರ ಆರ್ ಬಿ ಐ ಗವರ್ನರ್ ಉರ್ಜಿತ್ ಪಟೇಲ್ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಟಿ ಎಂ ಸಿ ಈ ಪ್ರತಿಭಟನೆ ನಡೆಸಿದೆ.
ಇಂಧನ ಸಚಿವ ಸೋವಂದೇಬ್ ಚಟ್ಟೋಪಾಧ್ಯಾಯ, ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಮ್, ಕೋಲ್ಕತ್ತಾ ಮೇಯರ್ ಸೋವನ್ ಚಟರ್ಜಿ ಸೇರಿದಂತೆ ಹಿರಿಯ ಮುಖಂಡರು ಮತ್ತು ಸಚಿವರು ಬುಧವಾರ ಮಧ್ಯಾಹ್ನ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
"ನೋಟು ಹಿಂಪಡೆತ ನಿರ್ಧಾರ ಪ್ರಕಟಿಸಿ ೩೫ ದಿನ ಕಳೆದಿದ್ದರು, ರಾಜ್ಯದ ಬ್ಯಾಂಕ್ ಗಳು ಮತ್ತು ಅಂಚೆ ಕಚೇರಿಗಳಲ್ಲಿ ಹೊಸ ನೋಟುಗಳ ಸರಬರಾಜಿನ ಅಭಾವದಿಂದ ನರಳುತ್ತಿವೆ. ಇದರಿಂದ ರಾಜ್ಯದ ಜನತೆ ಹಿಂದೆಂದೂ ಕಾಣದಂತೆ ತೊಂದರೆಗಳನ್ನು ಅನುಭವಿಸುತ್ತಿವೆ" ಎಂದು ತೃಣಮೂಲ ಕಾಂಗ್ರೆಸ್ ಮುಖಂಡ ಪಾರ್ಥ ಚಟರ್ಜಿ ಪ್ರತಿಭಟನೆಯ ವೇಳೆಯಲ್ಲಿ ಹೇಳಿದ್ದಾರೆ.