ಪ್ರಧಾನ ಸುದ್ದಿ

ಮಸೂದ್ ಅಜರ್ ಪಠಾಣ್ ಕೋಟ್ ದಾಳಿ ರೂವಾರಿ: ಎನ್ ಐಎಯಿಂದ ಚಾರ್ಜ್ ಶೀಟ್ ದಾಖಲು!

Srinivasamurthy VN

ನವದೆಹಲಿ: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ ಚಾರ್ಜ್ ಶೀಟ್ ದಾಖಲಿಸಿದ್ದು, ಜೈಷ್ ಇ ಮೊಹಮದ್ ಮುಖ್ಯಸ್ಥ ಮಸೂದ್ ಅಜರ್ ದಾಳಿ  ರೂವಾರಿ ಎಂದು ದಾಖಲಿಸಿದೆ.

ಕಳೆದ ಜನವರಿ ತಿಂಗಳಲ್ಲಿ ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರು ನಡೆಸಿದ್ದ ಭೀಕರ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ಪಂಜಾಬ್ ಪಂಚಕುಲ ಸ್ಪೆಷಲ್  ಕೋರ್ಟ್ ಗೆ  ಇಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಚಾರ್ಜ್ ಶೀಟ್ ನಲ್ಲಿ ಜೈಷ್ ಇ ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಅಜರ್ ಮಸೂದ್ ದಾಳಿ ಪ್ರಮುಖ ರೂವಾರಿ ಎಂದು ಹೇಳಿದೆ. ಅಂತೆಯೇ ಆತನ  ಸಹೋದರ ಅಸ್ಗರ್ ರೌವೂಫ್ ಎರಡನೇ ಆರೋಪಿ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ದಾಳಿ ಬಳಿಕ ಈತ ದಾಳಿಯ ಹೊಣೆ ಹೊತ್ತು ಬಿಡುಗಡೆ ಮಾಡಿದ್ದ ವಿಡಿಯೋವನ್ನೂ ಕೂಡ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ  ಮಾಡಲಾಗಿದೆ.

ಇದಲ್ಲದೆ ದಾಳಿಗೆ ನೆರವಾದ ಆರೋಪದ ಮೇರೆಗೆ ಖಾಶಿಫ್ ಜಾನ್, ಶೈದ್ ಲತೀಫ್ ಅವರ ಹೆಸರನ್ನೂ ಚಾರ್ಜ್ ಶೀಟ್ ನಲ್ಲಿ ದಾಖಲು ಮಾಡಲಾಗಿದೆ.

1999ರಲ್ಲಿ ಏರ್ ಇಂಡಿಯಾ ವಿಮಾನ ಐಸಿ-814 ವಿಮಾನವನ್ನು ಪಾಕಿಸ್ತಾನಕ್ಕೆ ಹೈಜಾಕ್ ಮಾಡಿದ್ದ ಉಗ್ರರು ಅದನ್ನು ಬಿಡುಗಡೆ ಮಾಡಲು ಉಗ್ರ ಮಸೂದ್ ಅಜರ್ ನನ್ನು ಬಿಡುಗಡೆ ಮಾಡುವಂತೆ ಕೋರಿದ್ದರು. ಅದರಂತೆ  ಪ್ರಯಾಣಿಕರ ಪ್ರಾಣ ಉಳಿಸಲು ಉಗ್ರ ಮಸೂದ್ ಅಜರ್ ನನ್ನು ಬಿಡುಗಡೆ ಮಾಡಲಾಗಿತ್ತು. ಬಳಿಕ ಜೈಷ್ ಇ ಮೊಹಮದ್ ಉಗ್ರ ಸಂಘಟನೆ ಮೂಲಕ ಮಸೂದ್ ಭಾರತದ ಪಠಾಣ್ ಕೋಟ್ ವಾಯುನೆಲೆ ಮೇಲೆ ಕಳೆದ ಜನವರಿ 2  ರಂದು ದಾಳಿ ಮಾಡಿಸಿದ್ದ.

ಮಸೂದ್ ಅಜರ್ ನನ್ನು ವಿಶ್ವಸಂಸ್ಥೆಯ ಉಗ್ರಗಾಮಿಗಳ ಪಟ್ಟಿಯಲ್ಲಿ ಸೇರಿಸುವ ಭಾರತದ ಪ್ರಯತ್ನಕ್ಕೆ ಚೀನಾ ತಡೆಯಾಗುತ್ತಿದ್ದಂತೆಯೇ ಕೇಂದ್ರ ಗೃಹ ಸಚಿವಾಲಯ ಮಸೂದ್ ಅಜರ್ ವಿರುದ್ಧ ಚಾರ್ಜ್ ದಾಖಲಿಸಲು ಎನ್ ಐಎ  ಅಧಿಕಾರಿಗಳಿಗೆ ಅನುಮತಿ ನೀಡಿತ್ತು. ಅದರಂತೆ ಉಗ್ರ ಮಸೂಜ್ ಅಜರ್ ವಿರುದ್ಧ ಅಧಿಕಾರಿಗಳು ಚಾರ್ಜ್ ಶೀಟ್ ದಾಖಲಿಸಿದ್ದಾರೆ.

SCROLL FOR NEXT