ಪ್ರಧಾನ ಸುದ್ದಿ

ಚೆನ್ನೈ ಐಟಿ ದಾಳಿ: ಟಿಟಿಡಿ ಸದಸ್ಯ ಶೇಖರ್ ರೆಡ್ಡಿ ಸೇರಿ ಮೂವರ ಬಂಧನ

Lingaraj Badiger
ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಮಲ ತಿರುಪತಿ ದೇವಸ್ಥಾನ ಸಮಿತಿ ಟ್ರಸ್ಟಿಯಲ್ಲೊಬ್ಬರಾದ ಚೆನ್ನೈ ಮೂಲದ ಉದ್ಯಮಿ ಜೆ. ಶೇಖರ್‌ ರೆಡ್ಡಿ ಸೇರಿದಂತೆ ಮೂವರನ್ನು ಸಿಬಿಐ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ಆದಾಯ ತೆರಿಗೆ ದಾಳಿಯ ನಂತರ ಇಂದು ಸಿಬಿಐ ಅಧಿಕಾರಿಗಳು ಶೇಖರ್ ರೆಡ್ಡಿ, ಶ್ರೀನಿವಾಸ್ ರೆಡ್ಡಿ ಹಾಗೂ ಪ್ರೇಮ್ ಅವರನ್ನು ಬಂಧಿಸಿ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ಕೋರ್ಟ್ ಮೂವರು ಆರೋಪಿಗಳನ್ನು ಜನವರಿ 03ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಕಳೆದ ವಾರ ಮೂವರ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು 170 ಕೋಟಿ ರು ನಗದು ಹಾಗೂ 130 ಕೆಜಿ ಚಿನ್ನ ಮತ್ತು ಆಭರಣವನ್ನು ಜಪ್ತಿ ಮಾಡಿದ್ದರು. ಚೆನ್ನೈ ನ ಎಂಟು ಕಡೆಗಳಲ್ಲಿ, ವೆಲ್ಲೂರು ಹಾಗೂ ಮುಂತಾದೆಡೆಗಳಲ್ಲಿ ದಾಳಿ ನಡೆಸಲಾಗಿತ್ತು.
ಈ ಮೂವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988, ಮನಿ ಲಾಂಡ್ರಿಂಗ್ ನಿಯಂತ್ರಣ ಕಾಯ್ದೆ (PMLA) ಉಲ್ಲಂಘನೆ ಆರೋಪದ ಮೇಲೆ ಸಿಬಿಐ ಎಫ್ ಐಆರ್ ದಾಖಲಿಸಿದೆ. ಅಲ್ಲದೆ ಜಾರಿ ನಿರ್ದೇಶನಾಲಯ ಕೂಡಾ ಐಪಿಸಿ ಸೆಕ್ಷನ್ 120 ಬಿ, 409, 420 ಅನ್ವಯ ಪ್ರಕರಣ ದಾಖಲಿಸಿಕೊಂಡಿದೆ.
ರೆಡ್ಡಿಯೊಂದಿಗೆ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಮ್ ಮೋಹನ್ ರಾವ್ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಿದೆ. 
SCROLL FOR NEXT