ಪ್ರಧಾನ ಸುದ್ದಿ

ಭಾರತದ ಅತ್ಯಂತ ದೂರಗಾಮಿ ಕ್ಷಿಪಣಿ ಅಗ್ನಿ-5 ಪರೀಕ್ಷಾರ್ಥ ಉಡಾವಣೆ ಯಶಸ್ವಿ!

Srinivasamurthy VN

ಭುವನೇಶ್ವರ್: "ದಿ ಗೇಮ್ ಚೆಂಜರ್" ಎಂದೇ ಖ್ಯಾತಿ ಪಡೆದಿರುವ ಭಾರತದ ಅತ್ಯಂತ ಪ್ರಬಲ ಮತ್ತು ಅತ್ಯಂತ ದೂರಗಾಮಿ ಕ್ಷಿಪಣಿ ಎಂದೇ ಖ್ಯಾತಗಳಿಸಿರುವ ಅಗ್ನಿ 5 ಕ್ಷಿಪಣಿಯನ್ನು ಸೋಮವಾರ ಯಶಸ್ವಿಯಾಗಿ ಉಡಾವಣೆ  ಮಾಡಲಾಗಿದೆ.

ಒಡಿಶಾದ ಸೇನೆಗೆ ಸೇರಿದ ವೀಲರ್ ದ್ವೀಪದಲ್ಲಿ ಅಗ್ನಿ 5 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ನಿಖರ ಸಮಯದಲ್ಲಿ ನಿರ್ಧಿಷ್ಟ ಗುರಿಯನ್ನು ಯಶಸ್ವಿಯಾಗಿ ತಲುಪುವ ಮೂಲಕ ಕ್ಷಿಪಣಿ ಯಶಸ್ವಿಯಾಗಿದೆ. ಆ  ಮೂಲಕ ಅಗ್ನಿ 5 ಕ್ಷಿಪಣಿಯ ಎಲ್ಲ ಪರೀಕ್ಷೆಗಳೂ ಯಶಸ್ವಿಯಾಗುವುದರೊಂದಿಗೆ ಈ ಪ್ರಬಲ ವಿಧ್ವಂಸಕ ಕ್ಷಿಪಣಿ ಸೇನೆ ಸೇರ್ಪಡೆ ಸಜ್ಜಾಗಿ ನಿಂತಿದೆ.

ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಈ ಪ್ರಬಲ ಅಣ್ವಸ್ತ್ರ ಕ್ಷಿಪಣಿಯನ್ನು ಸಿದ್ಧಪಡಿಸಿದ್ದು, ಪಾಕಿಸ್ತಾನದ ಬಹುತೇಕ ಪ್ರದೇಶಗಳು ಒಳಗೊಂಡಂತೆ ಉತ್ತರ ಚೀನಾದ ಯಾವುದೇ ಭಾಗ ಮತ್ತು  ಪಶ್ಚಿಮದಲ್ಲಿ ಯುರೋಪ್‌ನ ಕೊನೆಯ ಅಂಚಿನವರೆಗೂ ಕ್ಷಿಪಣಿಯು ತಲುಪುವ ಸಾಮರ್ಥ್ಯ ಹೊಂದಿದೆ. ಅಗ್ನಿ-5 ಮೂರು ಸ್ತರದ ಕ್ಷಿಪಣಿಯಾಗಿದ್ದು,17 ಮೀ. ಉದ್ದ ಮತ್ತು 1.5 ಟನ್‌ ಭಾರ ಹೊಂದಿದೆ. ಮೊದಲನೇ ಸ್ತರದ ರಾಕೆಟ್‌  ಎಂಜಿನ್‌, ಕ್ಷಿಪಣಿಯನ್ನು 40 ಕಿ.ಮೀ. ಎತ್ತರಕ್ಕೆ ಒಯ್ದರೆ, ಎರಡನೇ ಸ್ತರವು ಕ್ಷಿಪಣಿಯನ್ನು 150 ಕಿ.ಮೀ. ಎತ್ತರಕ್ಕೆ ನೂಕುತ್ತದೆ. 3ನೇ ಸ್ತರವು ಭೂಮಿಗಿಂತ 300 ಕಿ.ಮೀ. ಎತ್ತರಕ್ಕೆ ಕೊಂಡೊಯ್ಯುತ್ತದೆ.

ಅಂತಿಮವಾಗಿ ಸುಮಾರು 800 ಕಿ.ಮೀ. ಎತ್ತರಕ್ಕೆ ಕ್ಷಿಪಣಿ ತಲುಪುತ್ತದೆ. ಸುಮಾರು 1 ಸಾವಿರ ಕೆಜಿ ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ  ಸಾಮರ್ಥ್ಯ ಈ ಪ್ರಬಲ ಕ್ಷಿಪಣಿಗಿದ್ದು, ಸಂಚಾರಿ ಸಾಮರ್ಥ್ಯ ಇರುವ ಡಬ್ಬಿಯಾಕಾರದ  ಕ್ಯಾನಿಸ್ಟರ್‌ನಲ್ಲಿಟ್ಟು ಉಡಾಯಿಸುವಂಥ ಮಾದರಿಯ ಕ್ಷಿಪಣಿ ಇದು. ಉಡಾವಣೆಗೆ ಸ್ಥಿರ ವೇದಿಕೆಯೇ ಬೇಕೆಂದೇನೂ ಇಲ್ಲ. ಮೊಬೈಲ್‌ ಲಾಂಚರ್‌  ವಾಹನ ಬಳಕೆ ಮಾಡಿ ಈ ಕ್ಷಿಪಣಿಯನ್ನು ದೇಶದ ಯಾವುದೇ ಮೂಲೆಯಿಂದಾದರೂ  ತ್ವರಿತವಾಗಿ ಉಡಾಯಿಸಬಹುದಾಗಿದೆ. ಇನ್ನು ಕ್ಷಿಪಣಿಯ ಕ್ಯಾನಿಸ್ಟರ್‌ ವ್ಯವಸ್ಥೆ ವೈರಿಗಳ ಕಣ್ತಪ್ಪಿಸಲು ಸಹಕಾರಿಯಾಗುತ್ತದೆ. ಇದೇ ಕಾರಣಕ್ಕೆ  ಭಾರತದ ಈ ಪ್ರಬಲ ಕ್ಷಿಪಣಿ ಇದೀಗ ಚೀನಾ ಮತ್ತು ಪಾಕಿಸ್ತಾನ ದೇಶಗಳ ತಲೆನೋವಿಗೆ  ಕಾರಣವಾಗಿದೆ.

ಈ ಹಿಂದೆ 2012 ಮತ್ತು 2013 ಮತ್ತು 2015ರಲ್ಲಿ ಒಟ್ಟು 3 ಬಾರಿ ಅಗ್ನಿ-5 ಕ್ಷಿಪಣಿಯ ಮೂಲ ಆವೃತ್ತಿಯ ಪರೀಕ್ಷಾರ್ಥ ಉಡಾವಣೆನ ಮಾಡಲಾಗಿತ್ತು. ಈ ಮೂರೂ ಪರೀಕ್ಷೆಯೂ ಅಭೂತಪೂರ್ವ ಯಶಸ್ಸು ಸಾಧಿಸಿತ್ತು. ಇದೀಗ ತನ್ನ   ಅಂತಿಮ ಪರೀಕ್ಷೆ ಅಗ್ನಿ-5 ಕ್ಷಿಪಣಿ ಸಜ್ಜಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಇದನ್ನು ಪರೀಕ್ಷೆ ನಡೆಸಲು ಡಿಆರ್ ಡಿಒ ಸಿದ್ಧತೆ ಮಾಡಿಕೊಂಡಿದೆ.

ಮುಂದಿನ ವರ್ಷ ಸೇನೆಗೆ ಸೇರ್ಪಡೆ ಸಾಧ್ಯತೆ
ಇಂದು ನಡೆದ ನಾಲ್ಕನೇ ಹಾಗೂ ಅಂತಿಮ ಪರೀಕ್ಷೆಯಲ್ಲೂ ಕ್ಷಿಪಣಿ ಅಭೂತಪೂರ್ವ ಯಶಸ್ಸು ಸಾಧಿಸಿದ್ದು, ರಕ್ಷಣಾ ಇಲಾಖೆಯ  ಮೂಲಗಳು ತಿಳಿಸಿರುವಂತೆ ಮುಂದಿನ ವರ್ಷದೊಳಗಾಗಿ ಈ ಅಗ್ನಿ-5 ಕ್ಷಿಪಣಿಯನ್ನು ಭಾರತೀಯ  ಸೇನೆಯ ಕಾರ್ಯಾಚರಣೆಗೆ ಅಳವಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

SCROLL FOR NEXT