ಲಖನೌ: ಮಹತ್ವದ ಬೆಳವಣಿಗೆಯೊಂದರಲ್ಲಿ ಕಪ್ಪುಹಣದ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇದೀಗ ರಾಜಕೀಯ ಪಕ್ಷಗಳ ಮೇಲೆ ಮುಗಿಬಿದ್ದಿದ್ದು, ಬಹುಜನ ಸಮಾಜವಾದಿ ಪಕ್ಷದ ಖಾತೆಗಳಲ್ಲಿ ಒಟ್ಟು 105 ಕೋಟಿ ಹಳೆಯ ನೋಟುಗಳು ಪತ್ತೆ ಮಾಡಿದ್ದಾರೆ.
ಉತ್ತರ ಪ್ರದೇಶದ ವಿವಿಧ ಬ್ಯಾಂಕುಗಳಲ್ಲಿ ಸೋಮವಾರ ಶೋಧ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಎಸ್ ಪಿ ಪಕ್ಷಕ್ಕೆ ಸೇರಿದ ಖಾತೆಗಳಲ್ಲಿ ಒಟ್ಟು 105 ಕೋಟಿ ರು.ಹಣ ಇರುವುದನ್ನು ಪತ್ತೆ ಮಾಡಿದ್ದಾರೆ. ಈ 105 ಕೋಟಿ ರು.ಹಣ ಹಳೆಯ ನಿಷೇಧಿತ ನೋಟುಗಳಲ್ಲಿ ಜಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಯುನೈಟೆಡ್ ಬ್ಯಾಂಕ್ ನಲ್ಲಿರುವ ಮಾಯಾವತಿ ಅವರ ಸಹೋದರ ಆನಂದ್ ಕುಮಾರ್ ಅವರ ಬ್ಯಾಂಕ್ ಖಾತೆಯಲ್ಲಿ 1.43 ಕೋಟಿ ರು.ಹಣವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಬಿಎಸ್ ಪಕ್ಷದ ಖಾತೆಗಳಲ್ಲಿರುವ 105 ಕೋಟಿ ರು.ಹಣದ ಪೈಕಿ 102 ಕೋಟಿ ನಿಷೇಧಿತ 1000 ರು.ಮುಖಬೆಲೆಯ ನೋಟುಗಳಲ್ಲಿ ಜಮೆಯಾಗಿದ್ದು, ಉಳಿದ 3 ಕೋಟಿ ಹಣ ಹಳೆಯ 500 ರು.ಮುಖಬೆಲೆಯ ನೋಟಿನದ್ದಾಗಿದೆ. ನೋಟು ನಿಷೇಧದ ಬಳಿಕ ಬಿಎಸ್ ಪಿ ಖಾತೆ 15ರಿಂದ 17 ಕೋಟಿ ರು.ಹಣ ನಿಯಮಿತವಾಗಿ ಜಮೆಯಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ಹಣದ ಮೂಲದ ಕುರಿತು ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಬ್ಯಾಂಕ್ ಶೋಧ ವೇಳೆ ಸಿಕ್ಕ ಸಾಕ್ಷಿಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ.