ನವದೆಹಲಿ: ಭಾರತದ ದಶಕಗಳ ಕನಸಾದ ಪರಮಾಣು ಪೂರೈಕೆದಾರರ ಒಕ್ಕೂಟ (ಎನ್ ಎಸ್ ಜಿ) ಸೇರ್ಪಡೆ ಸದ್ಯದಲ್ಲೇ ನನಸಾಗುವ ಸಾಧ್ಯತೆ ಇದ್ದು, ಪಾಕಿಸ್ತಾನವನ್ನು ಹಿಂದಿಕ್ಕಿ ಭಾರತ ಎನ್ ಎಸ್ ಜಿ ಸದಸ್ಯತ್ವ ಪಡೆಯಲಿದೆ ಎಂದು ವರದಿಯೊಂದು ತಿಳಿಸಿದೆ.
ಅಮೆರಿಕದ ಶಸ್ತ್ರಾಸ್ತ್ರ ನಿಯಂತ್ರ ಪ್ರಾಧಿಕಾರ (ಎಸಿಎ)ದ ಅಧಿಕಾರಿಗಳು ಅಭಿಪ್ರಾಯಪಟ್ಟಿರುವಂತೆ ಎನ್ ಎಸ್ ಜಿ ಒಕ್ಕೂಟದ ಕರಡು ನೀತಿಯಲ್ಲಿ ತಿದ್ದುಪಡಿ ತರಲಾಗಿದ್ದು, ನೂತನ ಕರಡು ನೀತಿಯ ಅನ್ವಯ ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಪಡೆಯುವ ಎಲ್ಲ ಅರ್ಹತೆ ಇದೆ ಎಂದು ಹೇಳಿದೆ. ಅಂತೆಯೇ ಭಾರತದೊಂದಿಗೆ ತಾನೂ ಒಕ್ಕೂಟ ಸೇರಬೇಕು ಎಂದು ಬಯಸಿದ್ದ ಪಾಕಿಸ್ತಾನದ ಆಸೆ ಮಾತ್ರ ಆಸೆಯಾಗಿಯೇ ಇರಲಿದ್ದು, ಕರಡು ನೀತಿ ತಿದ್ದುಪಡಿಯಾದರೂ ಪಾಕಿಸ್ತಾನ ಸದಸ್ಯತ್ವ ಪಡೆಯುವ ಅರ್ಹತೆ ಪಡೆದಿಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಇದೇ ವೇಳೆ ಎನ್ ಎಸ್ ಜಿ ಸದಸ್ಯತ್ವದಲ್ಲಿನ ಕರಡು ನೀತಿ ತಿದ್ದುಪಡಿಯಿಂದಾಗಿ ಹಲವು ಸಮಸ್ಯೆಗಳು ಎದುರಾಗಲಿವೆ ಎಂದೂ ಎಸಿಎ ಅಭಿಪ್ರಾಯಪಟ್ಟಿದ್ದು, ಭಾರತ ಮತ್ತು ಪಾಕಿಸ್ತಾನ ರಾಷ್ಟಗಳು ಪರಸ್ಪರ ಎನ್ ಎಸ್ ಜಿ ಸದಸ್ಯತ್ವ ಪಡೆಯದಂತೆ ತಡೆ ಒಡ್ಡುತ್ತಿರುವ ಕುರಿತೂ ಎಸಿಎ ಆತಂಕ ವ್ಯಕ್ತಪಡಿಸಿದೆ.
ಇನ್ನು ಕಳೆದ ವಾರವಷ್ಟೇ ಎನ್ ಎಸ್ ಜಿ ಒಕ್ಕೂಟದ ಮಾಜಿ ಅಧ್ಯಕ್ಷ ರಾಫೆಲ್ ಮರಿಯಾನೋಗ್ರಾಸಿ ಅವರು ನೂತನ ತಿದ್ದುಪಡಿಗಳಿರುವ ಸುಮಾರು 2 ಪುಟಗಳ ಎನ್ ಎಸ್ ಜಿ ಕರಡು ನೀತಿಯನ್ನು ಸಿದ್ಧಪಡಿಸಿದ್ದಾರೆ. ಈ ಕರಡು ನೀತಿಯಲ್ಲಿ ಹೇಗೆ ಎನ್ ಎಸ್ ಜಿ ಒಕ್ಕೂಟಕ್ಕೆ ನೂತನ ರಾಷ್ಟ್ರವನ್ನು ಆಯ್ಕೆ ಮಾಡಿಕೊಳ್ಳುಬೇಕು ಮತ್ತು ಸದಸ್ಯತ್ವ ಬಯಸುವ ರಾಷ್ಟ್ರ ಯಾವೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಎಂಬಿತ್ಯಾದಿ ಅಂಶಗಳನ್ನು ಅದರಲ್ಲಿ ನಮೂದಿಸಿದ್ದಾರೆ ಎಂದು ತಿಳಿದುಬಂದಿದೆ. ಈ ನೂತನ ಕರಡು ಪ್ರತಿಯನ್ನು ಅವರು ಒಕ್ಕೂಟದ ಹಾಲಿ ಅಧ್ಯಕ್ಷ ದಕ್ಷಿಣ ಕೊರಿಯಾ ಮೂಲದ ಸಾಂಗ್ ಯಂಗ್ ವಾನ್ ಅವರಿಗೆ ಸಲ್ಲಿಕೆ ಮಾಡಲಿದ್ದಾರೆ.
ಇನ್ನು ರಾಫೆಲ್ ಮರಿಯಾನೋಗ್ರಾಸಿ ಅವರು ತಮ್ಮ ಕರಡು ನೀತಿಯಲ್ಲಿ ಎನ್ ಎಸ್ ಜಿ ಸದಸ್ಯ ಬಯಸುವ ರಾಷ್ಟ್ರ ಬೇರೊಂದು ಸದಸ್ಯವಲ್ಲದ ರಾಷ್ಟ್ರಕ್ಕೆ ಸದಸ್ಯತ್ವ ಸಿಗದಂತೆ ತಡೆ ಒಡ್ಡಿದರೆ ಆ ರಾಷ್ಟ್ರ ಎನ್ ಎಸ್ ಜಿ ಸದಸ್ಯತ್ವ ಪಡೆಯುವ ಅರ್ಹತೆ ಕಳೆದುಕೊಳ್ಳುತ್ತದೆ ಎಂಬ ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ. ಇದು ಪ್ರಸ್ತುತ ಪರಸ್ಪರ ತಡೆಯೊಡ್ಡುತ್ತಿರುವ ಭಾರತ ಮತ್ತು ಪಾಕಿಸ್ತಾನ ದೇಶಗಳಿಗೆ ಅನ್ವಯವಾಗಲಿದೆ ಎಂದೂ ಹೇಳಲಾಗುತ್ತಿದೆ. ಇದಲ್ಲದೆ ಇತರೆ ವಿಚಾರಗಳಲ್ಲಿ ಪಾಕಿಸ್ತಾನಕ್ಕಿಂತ ಭಾರತ ಮುಂದಿದ್ದು, ಮುಂದಿನ ಎನ್ ಎಸ್ ಜಿ ಕಲಾಪದ ವೇಳೆಗೆ ಭಾರತದ ಎನ್ಎಸ್ ಜಿ ಸದಸ್ಯತ್ವ ವಿಚಾರ ಚರ್ಚೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಭಾರತ ದೇಶ ಈಗಾಗಲೇ ಎನ್ ಎಸ್ ಜಿ ಸದಸ್ಯ ರಾಷ್ಟ್ರಗಳೊಂದಿಗೆ ಶಸ್ತ್ರಾಸ್ತ್ರ ವಹಿವಾಟು ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ನೋಡುವುದಾದರೇ ಪಾಕಿಸ್ತಾನ ಎನ್ ಎಸ್ ಜಿ ಸದಸ್ಯತ್ವ ಪಡೆಯಲು ಸಾಕಷ್ಟು ಅಡೆತಡೆಗಳಿವೆ ಎಂದು ಎಸಿಎ ಕಾರ್ಯಕಾರಿ ನಿರ್ದೇಶಕ ಡರಿಲ್ ಕಿಂಬಾಲ್ ಹೇಳಿದ್ದಾರೆ. 1975ರಲ್ಲಿ ಭಾರತ ತನ್ನ ಮೊದಲ ಪರಮಾಣು ಶಸ್ತ್ರವನ್ನು ಪರೀಕ್ಷೆಗೆ ಒಳಪಡಿಸಿತ್ತು. ಪರಮಾಣು ಇಂಧನದ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಅದೇ ವರ್ಷ ಎನ್ ಎಸ್ ಜಿ ಒಕ್ಕೂಟ ರಚನೆಯಾಗಿತ್ತು. ಅಂದು ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆ ನಡೆಸಿದ್ದ ಭಾರತವನ್ನು ಒಕ್ಕೂಟದಿಂದ ಹೊರಗಿಡಲಾಗಿತ್ತು.