ರಾಜ್ಯ ಸಚಿವರಿಗೆ ಬಂಪರ್; ತಿಂಗಳಿಗೆ ಸಾವಿರ ಲೀಟರ್ ಪೆಟ್ರೋಲ್
ರಾಜ್ಯ ಸಚಿವರಿಗೆ ಕರ್ನಾಟಕ ಸರ್ಕಾರ ಬಂಪರ್ ಪೆಟ್ರೋಲ್ ಭತ್ಯೆ ಘೋಷಣೆ ಮಾಡಿದ್ದು, ಸಚಿವರಿಗಿದ್ದ ಪೆಟ್ರೋಲ್ ಭತ್ಯೆಯನ್ನು 750 ಲೀಟರ್ ನಿಂದ ಬರೊಬ್ಬರಿ 1000 ಲೀಟರ್ ಗೆ ಏರಿಕೆ ಮಾಡಿ ಆದೇಶ ಹೊರಡಿಸಿದೆ..
ಬೆಂಗಳೂರು: ರಾಜ್ಯ ಸಚಿವರಿಗೆ ಕರ್ನಾಟಕ ಸರ್ಕಾರ ಬಂಪರ್ ಪೆಟ್ರೋಲ್ ಭತ್ಯೆ ಘೋಷಣೆ ಮಾಡಿದ್ದು, ಸಚಿವರಿಗಿದ್ದ ಪೆಟ್ರೋಲ್ ಭತ್ಯೆಯನ್ನು 750 ಲೀಟರ್ ನಿಂದ ಬರೊಬ್ಬರಿ 1000 ಲೀಟರ್ ಗೆ ಏರಿಕೆ ಮಾಡಿ ಆದೇಶ ಹೊರಡಿಸಿದೆ.
ಸದ್ಯ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 63.38 ರುಪಾಯಿ ಇದ್ದು, ಈ ಲೆಕ್ಕಾಚಾರದ ಪ್ರಕಾರ ರಾಜ್ಯ ಪ್ರತೀ ಸಚಿವರಿಗೆ ಪೆಟ್ರೋಲ್ಗೆ ಮಾಸಿಕ 63,380 ರುಪಾಯಿ ದೊರೆಯುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಈ ಆದೇಶವನ್ನು ಹೊರಡಿಸಿದ್ದು, ಜ.28 ರಿಂದಲೇ ಇದು ಜಾರಿಗೆ ಬಂದಿದೆ.
ಕಳೆದ 10 ತಿಂಗಳ ಹಿಂದೆಯಷ್ಟೇ ರಾಜ್ಯ ಸರ್ಕಾರ ಮುಖ್ಯಮಂತ್ರಿ ಮತ್ತು ಸಚಿವರ ವೇತನ ಹಾಗೂ ಮತ್ತಿತರ ಭತ್ಯೆಗಳನ್ನು ಹೆಚ್ಚಳ ಮಾಡಿತ್ತು. ಇದಷ್ಟೇ ಅಲ್ಲ ಪೆಟ್ರೋಲ್, ಡೀಸೆಲ್ ದರ ಏರಿಕೆಯಾದಾಗ, ಸಚಿವರಿಗೆ ನಷ್ಟವುಂಟಾದರೆ, ಅವರು ಬಿಲ್ ಕೊಟ್ಟು ಹೆಚ್ಚಾದ ಹಣವನ್ನು ವಾಪಸ್ ಪಡೆಯಬಹುದು ಎಂಬ ನಿಯಮವನ್ನೂ ರೂಪಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಸರು ಹೇಳಲಿಚ್ಛಿಸದ ಹಿರಿಯ ಸಚಿವರೊಬ್ಬರು ಮಾತನಾಡಿದ್ದು, "ಸರ್ಕಾರ ಹಿಂದೆ ಕೊಡುತ್ತಿದ್ದ ಪೆಟ್ರೋಲ್ ಸಾಕಾಗುತ್ತಿರಲಿಲ್ಲ. ನಾವೇ ಕೈಯಿಂದ ಹಣ ಕೊಟ್ಟು ಹೆಚ್ಚುವರಿ ಪೆಟ್ರೋಲ್ ಹಾಕಿಸಿಕೊಳ್ಳಬೇಕಿತ್ತು. ಹೀಗಾಗಿ ಸರ್ಕಾರ ಪೆಟ್ರೋಲ್ ನೀಡುವ ಪ್ರಮಾಣ ಹೆಚ್ಚು ಮಾಡಿರುವುದು ಸ್ವಾಗತದ ವಿಚಾರ ಎಂದಿದ್ದಾರೆ.
ಸರ್ಕಾರದ ಈ ನಿರ್ಧಾರದಿಂದ ಬೆಂಗಳೂರಿನಿಂದ ಹೊರಗಿರುವ ಸಚಿವರಿಗೆ ಅನುಕೂಲವಾಗುತ್ತದೆ ಎಂದು ಭಾವಿಸಿದರೂ, ಬೆಂಗಳೂರಿನಲ್ಲಿರುವ ಸಚಿವರು ನಿಜಕ್ಕೂ ಅಷ್ಟೊಂದು ಪ್ರಮಾಣದ ಪೆಟ್ರೋಲ್ ಅನ್ನು ಬಳಕೆ ಮಾಡುತ್ತಾರೆಯೇ ಎಂಬ ಪ್ರಶ್ನೆ ಕೂಡ ಮೂಡುತ್ತದೆ. ಇನ್ನು ಸರ್ಕಾರದ ಈ ನಿರ್ಧಾರದಿಂದ ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.