ಪ್ರಧಾನ ಸುದ್ದಿ

ಮಕ್ಕಳ ಕಳ್ಳ ಸಾಗಣೆಗೆ ಬೆಂಗಳೂರೇ ಕೇಂದ್ರ ಬಿಂದು: ಅಮೆರಿಕಾಗೆ 30ಕ್ಕೂ ಹೆಚ್ಚು ಮಕ್ಕಳ ಕಳ್ಳ ಸಾಗಣೆ

Mainashree
ಬೆಂಗಳೂರು: ವಿದೇಶಕ್ಕೆ ಮಕ್ಕಳ ಕಳ್ಳ ಸಾಗಣೆ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಪೊಲೀಸರು ನಿನ್ನೆ ಏಕಕಾಲಕ್ಕೆ ದಾಳಿ ನಡೆಸಿ 16 ಆರೋಪಿಗಳನ್ನು ಬಂಧಿಸಿದ್ದಾರೆ.
ವಿಶಿಷ ತನಿಖಾ ತಂಡ(ಎಸ್ ಐಟಿ)ಅಧಿಕಾರಿಗಳ ತಂಡ ಅಮೆರಿಕಾಗೆ ಮಕ್ಕಳ ಕಳ್ಳ ಸಾಗಣೆಯಲ್ಲಿ ನಿರತರಾಗಿದ್ದ ಜಾಲವೊಂದರ ಮೇಲೆ ದಾಳಿ ನಡೆಸಿದ್ದಾರೆ. ದೇಶದ ವಿವಿದೆಡೆಯಿಂದ ಮಕ್ಕಳನ್ನು ಕಳ್ಳ ಸಾಗಣೆ ಮಾಡುತ್ತಿದ್ದರು. ಆದರೆ, ಬೆಂಗಳೂರನ್ನು ಕಳ್ಳ ಸಾಗಣೆ ಕೇಂದ್ರವನ್ನಾಗಿಟ್ಟಿಕೊಂಡಿದ್ದ ಸತ್ಯ ಬಹಿರಂಗವಾಗಿದೆ. ನಿನ್ನೆ ಬೆಳಿಗ್ಗೆ ಎಸ್ ಐಟಿ ಅಧಿಕಾರಿಗಳ 14 ತಂಡ, 13 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಮಕ್ಕಳ ಕಳ್ಳ ಸಾಗೆಣೆ ಜಾಲದ ಕಿಂಗ್ ಪಿನ್ ಉದಯ್ ಪ್ರತಾಪ್ ಸಿಂಗ್, ಇಬ್ಬರು ಮಹಿಳೆಯರು ಸೇರಿ 16 ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ ಹರಿಶೇಖರನ್, ಅಮೆರಿಕಾಗೆ ಮಕ್ಕಳನ್ನು ಕಳ್ಳ ಸಾಗಣೆ ಮಾಡುತ್ತಿರುವ ಜಾಲದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಜಾಲದ ಪತ್ತೆಗಾಗಿ ಒಂದು ವರ್ಷದ ಹಿಂದೆ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಒಂದು ವರ್ಷಗಳ ಕಾಲ ಪೂರ್ಣ ಮಾಹಿತಿ ಕಲೆ ಹಾಕಿದ ನಂತರ ಜಾಲದ ಮೇಲೆ ದಾಳಿ ನಡೆಸಿ 16 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಉದಯ್ ಪ್ರತಾಪ್ ಸಿಂಗ್(44), ಹೊರಮಾವು ನಿವಾಸಿಗಳಾದ ಮೈಕೆಲ್ (37), ಪ್ರವೀಣ್ (43), ಸಹಕಾರನಗರದ ರಾಜೇಶ್(43ಿ), ಆರ್ ಟಿ ನಗರ ನಿವಾಸಿಗಳಾದ ಸೈಮನ್(36), ಕುಶಾಲಪ್ಪ(34), ಬಾಣಸವಾಡಿ ಗಣಶೇಖರ್(42), ಗೆದ್ದಲಹಳ್ಳಿಯ ಡಾಮಿನಿಕ್ ಅರುಳ್ ಕುಮಾರ್(46), ಬೊಮ್ಮನಹಳ್ಳಿಯ ಜೋಯ್ಸ್ ನ್(37) ಮಹಾಲಕ್ಷ್ಮೀಪುರಂನ ಮಂಜುನಾಥ(38), ಕಮ್ಮನಹಳ್ಳಿಯ ಫ್ರಾನ್ಸಿಸ್ ಕ್ರಿಸ್ಟೋಫರ್ ಆನಂದ್ ಆಂಥೋಣಿ, ರಾಮಮೂರ್ತಿನಗರದ ಸಂಗೀತಾ ಪ್ರಕಾಶ್, ಎಚ್ ಎಎಳ್ ನ ಲತಾ ವೇಮರೆಡ್ಡಿ, ಬನಶಂಕರಿಯ ಸುಧೀರ್ ಕುಮಾರ್ ಕೆಸ್ತೂರ್, ಗಿರಿನಗರದ ಬಾನುಪ್ರಕಾಶ್ ಮತ್ತು ವೀಣಾ ಪ್ರಕಾಶ್ ಬಂಧಿತ ಆರೋಪಿಗಳು.
ಉದಯ್ ಪ್ರತಾಪ್ ಸಿಂಗ್ ಎಂಬುವವನು ಗುಜರಾತ್, ಹರಿಯಾಣ, ಉತ್ತರಪ್ರದೇಶ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಏಜೆಂಟ್ ಗಳನ್ನು ನೇಮಿಸಿಕೊಂಡು ಜಾಲ ಮುನ್ನಡೆಸುತ್ತಿದ್ದ. ಕಳೆದ ಒಂದು ವರ್ಷದ ಅವಧಿಯಲ್ಲಿ 10 ವರ್ಷದೊಳಗಿನ 25ರಿಂದ 30 ಮಕ್ಕಳನ್ನು ಅಕ್ರಮವಾಗಿ ಅಮೆರಿಕಾಗೆ ಸಾಗಣೆ ಮಾಡಲಾಗಿದೆ ಎಂದು ಆರೋಪಿಗಳ ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
SCROLL FOR NEXT