ತಾಂಜೇನಿಯಾ ಯುವತಿ ಥಳಿತ ಪ್ರಕರಣದ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆಗೆ ಒತ್ತಾಯಿಸಿ ಆಫ್ರಿಕನ್ ವಿದ್ಯಾರ್ಥಿಗಳು ಬೆಂಗಳೂರಿನ ಟೌನ್ ಹಾಲ್ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.
ಬೆಂಗಳೂರು: ತಾಂಜೇನಿಯಾ ಯುವತಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತು ಆದೇಶಕ್ಕೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಮಂಗಳವಾರ ತಡೆ ನೀಡಿದೆ.
ಪ್ರಕರಣದ ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸುತ್ತಿಲ್ಲ ಎಂಬ ಆರೋಪದ ಮೇಲೆ ಯಶವಂತಪುರ ಹೆಚ್ಚುವರಿ ಪೊಲೀಸ್ ಆಯುಕ್ತ(ಎಸಿಪಿ) ಅಶ್ವತನಾರಾಯಣ ಪಿ. ಹಾಗೂ ಕರ್ತವ್ಯ ಲೋಪ ಆರೋಪದ ಮೇಲೆ ಸೋಲದೇವನಹಳ್ಳಿ ಇನ್ಸ್ ಪೆಕ್ಟರ್ ಪ್ರವೀಣ್ ಬಾಬು ಅವರನ್ನು ಅಮಾನತುಗೊಳಿಸಲಾಗಿತ್ತು.
ಸರ್ಕಾರದ ಅಮಾನತು ಆದೇಶವನ್ನು ಪ್ರಶ್ಮಿಸಿ ಎಸಿಪಿ ಹಾಗೂ ಇನ್ಸ್ ಪೆಕ್ಟರ್ ಕೆಎಟಿ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೆಎಟಿ ನ್ಯಾಯಾಂಗ ಸದಸ್ಯ ಮೂಸಾ ಖುನ್ಹಿ ನಯರ್ಮೂಲೆ ಅವರು, ಅಮಾನತು ಆದೇಶಕ್ಕೆ ಎರಡು ವಾರಗಳ ಕಾಲ ತಡೆಯಾಜ್ಞೆ ನೀಡಿದ್ದಾರೆ.
ಮದ್ಯ ಸೇವಿಸಿದ್ದ ಸೂಡಾನ್ ವಿದ್ಯಾರ್ಥಿ ಮೊಹಮದ್ ಅಹದ್ (21) ಎಂಬಾತ ಮನಬಂದಂತೆ ಕಾರು ಚಾಲನೆ ಮಾಡಿಕೊಂಡು ಬಂದು ಹೆಸರುಘಟ್ಟ ಮುಖ್ಯರಸ್ತೆಯ ಗಣಪತಿ ನಗರದಲ್ಲಿ ಸನಾವುಲ್ಲಾ ಅವರ ಬೈಕ್‌ಗೆ ಡಿಕ್ಕಿ ಹೊಡೆಸಿದ್ದ. ಪರಿಣಾಮ ಅವರ ಪತ್ನಿ ಶಬಾನಾ ತಾಜ್ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳದಲ್ಲಿದ್ದ ಜನ ಕಾರಿನಲ್ಲಿದ್ದ ತಾಂಜೇನಿಯಾದ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ, ಕಾರಿಗೂ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆ ಸಂಬಂಧ ಇದುವರೆಗೆ 9 ಮಂದಿಯನ್ನು ಬಂಧಿಸಲಾಗಿದ್ದು, ಎಸಿಪಿ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.