ರಾಜ್ಯದಲ್ಲಿ ಉಪಚುನಾವಣಾ ಸಮರ: 2 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ
ಬೆಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಅಂತಿಮ ಫಲಿತಾಂಶ ಹೊರಬಿದ್ದಿದೆ. ಹೆಬ್ಬಾಳ ಹಾಗೂ ದೇವದುರ್ಗದಲ್ಲಿ ಕಮಲ ತನ್ನ ವಿಜಯಪತಾಕೆಯನ್ನು ಹಾರಿಸಿದ್ದು, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್'ಗೆ ಮುಖಭಂಗವಾಗಿದೆ.
ಮತಎಣಿಕೆ ಆರಂಭವಾದಾಗಿನಿಂದಲೂ ಬಿಜೆಪಿಯ ದೇವದುರ್ಗ ಅಭ್ಯರ್ಥಿ ಶಿವನಗೌಡ ನಾಯಕ್ ಹಾಗೂ ಹೆಬ್ಬಾಳ ಕ್ಷೇತ್ರದ ವೈ.ಎ. ನಾರಾಯಣಸ್ವಾಮಿ ಅವರು ಮುನ್ನಡೆ ಸಾಧಿಸುತ್ತಲೇ ಬಂದಿದ್ದರು. ಇದರಂತೆ ಮತಎಣಿಕೆ ಆರಂಭವಾದ ಕೆಲವು ಗಂಟೆಗಳಲ್ಲೇ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ ಎಂದು ಹೇಳಲಾಗುತ್ತಿತ್ತು. ಬಿಜೆಪಿ ಕಾರ್ಯಕರ್ತರು ಕೂಡ ವಿಜಯದ ಪತಾಕೆ ನಮ್ಮದೆ ಎಂಬಂತೆ ಹೆಬ್ಬಾಳ ಹಾಗೂ ದೇವದುರ್ಗದಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದರು. ಇದೀಗ ಫಲಿತಾಂಶದ ಸ್ಪಷ್ಟನೆ ಹೊರಬಿದ್ದಿದ್ದು, ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಇದರಂತೆ ಕಾಂಗ್ರೆಸ್ ಪಕ್ಷ ಕೂಡ ಬೀದರ್ ನಲ್ಲಿ ಭಾರೀ ಅಂತರದಲ್ಲಿ ಗೆಲವು ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಅವರನ್ನು ಹಿಂದಿಕ್ಕಿ ಬೀದರ್ ನಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ಫೆಬ್ರುವರಿ 13ರಂದು ಹೆಬ್ಬಾಳ, ದೇವದುರ್ಗ ಮತ್ತು ಬೀದರ್ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿತ್ತು. ಹೆಬ್ಬಾಳದಲ್ಲಿ ಶೇ.46ರಷ್ಟು, ದೇವದುರ್ಗದಲ್ಲಿ 61ರಷ್ಟು, ಬೀದರ್ ಕ್ಷೇತ್ರದಲ್ಲಿ ಶೇ.56ರಷ್ಟು ಮತದಾನವಾಗಿತ್ತು. ಬೀದರ್ ಶಾಸಕರಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ (ಬಿಜೆಪಿ), ಹೆಬ್ಬಾಳದ(ಬಿಜೆಪಿ) ಶಾಸಕರಾಗಿದ್ದ ಜಗದೀಶ್ ಕುಮಾರ್, ದೇವದುರ್ಗದ(ಕಾಂಗ್ರೆಸ್) ಶಾಸಕ ವೆಂಕಟೇಶ್ ನಾಯಕ್ ನಿಧನವಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿತ್ತು. ಇದರಂತೆ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಸಾಧಿಸಿದ್ದು, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.