ಪ್ರಧಾನ ಸುದ್ದಿ

ದೇಶದ ವಿರುದ್ಧ ಮಾತನಾಡುವುದನ್ನು ತಡೆಯಲು ದೇಶದ್ರೋಹ ಕಾನೂನು ಅಗತ್ಯ: ಸಂತೋಷ್ ಹೆಗ್ಡೆ

Lingaraj Badiger
ನವದೆಹಲಿ: ದೇಶದ ವಿರುದ್ಧ ಮಾತನಾಡುವುದನ್ನು ಮತ್ತು ದೇಶದ ಹೆಸರು ಹಾಳು ಮಾಡುವುದನ್ನು ತಡೆಯಲು ದೇಶದ್ರೋಹದ ಕಾನೂನಿನ ಅಗತ್ಯ ಇದೆ ಎಂದು ಮಾಜಿ ಲೋಕಾಯುಕ್ತ ಹಾಗೂ ಭಾರತದ ಮಾಜಿ ಸಾಲಿಸಿಟರ್‌ ಜನರಲ್‌ ಎನ್‌ ಸಂತೋಷ್‌ ಹೆಗ್ಡೆ ಅವರು ಸೋಮವಾರ ಹೇಳಿದ್ದಾರೆ.
ಸಂಸತ್ ದಾಳಿ ರೂವಾರಿ ಅಫ್ಜಲ್‌ ಗುರುವನ್ನು ಗಲ್ಲಿಗೇರಿಸಿದ ಪ್ರಕರಣ ನ್ಯಾಯಾಂಗದಿಂದ ನಡೆದ ಕೊಲೆ ಎಂದು ಹೇಳಿ ದೇಶ ವಿರೋಧಿ ಘೋಷಣೆಗಳನ್ನು ಕೂಗುವುದು ಖಂಡಿತವಾಗಿಯೂ ದೇಶದ್ರೋಹ ಎನಿಸುತ್ತದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಅಭಿಪ್ರಾಯಪಟ್ಟಿದ್ದಾರೆ.
ದೇಶದ್ರೋಹದ ಕಾನೂನಿನಲ್ಲಿ ನನಗೆ ನಂಬಿಕೆ ಇದೆ. ಏಕೆಂದರೆ ನಾನೊಬ್ಬ ದೇಶಪ್ರೇಮಿ. ನಿಜವಾದ ದೇಶಪ್ರೇಮಿಗಳು ಎಂದೂ ದೇಶದ ವಿರುದ್ಧ ಘೋಷಣೆ ಕೂಗುವುದಿಲ್ಲ; ದೇಶದ ಹೆಸರನ್ನು ಹಾಳು ಮಾಡುವುದಿಲ್ಲ; ಸಂವಿಧಾನದತ್ತವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹಲವಾರು ಮಾನದಂಡಗಳಿವೆ ಎಂದು ಹೆಗ್ಡೆ ಹೇಳಿದ್ದಾರೆ.
"ಈ ದೇಶದಲ್ಲಿ ಕೆಲವರು ಬೇರೆಯೇ ದೇಶಕ್ಕೆ ನಿಷ್ಠೆ ಹೊಂದಿದವರಿದ್ದಾರೆ ಮತ್ತು ದೇಶ ವಿರೋಧಿ ಗುಂಪುಗಳಿಗೆ ನಿಷ್ಠರಾಗಿರುವವರಿದ್ದಾರೆ; ಅವರು ವಿಭಿನ್ನವಾಗಿ ಚಿಂತಿಸುತ್ತಾರೆ. ದೇಶದಲ್ಲಿ ಪ್ರಜಾಸತ್ತೆ ಉಳಿಯಬೇಕಾದರೆ ದೇಶದ ವಿರುದ್ಧ ಮಾತನಾಡುವವರ ವಿರುದ್ಧ ಕಾನೂನು ರೀತ್ಯಾ ನಿರ್ಬಂಧಗಳು ಇರುವುದು ಅತೀ ಅಗತ್ಯ' ಎಂದು ಹೆಗ್ಡೆ ಹೇಳಿದರು.
ಕೆಲವು ದಿನಗಳ ಹಿಂದೆ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿದ್ದು, ತಲೆಮರೆಸಿಕೊಂಡಿದ್ದ ಇನ್ನೂ ಐವರು ವಿದ್ಯಾರ್ಥಿಗಳ ನಿನ್ನೆ ರಾತ್ರಿಯಷ್ಟೇ ವಿವಿ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ.
SCROLL FOR NEXT