ಜಾಟ್ ಪ್ರತಿಭಟನಾಕಾರರ ಆಕ್ರೋಶಕ್ಕೆ ಸುಟ್ಟು ಭಸ್ಮವಾದ ವಾಹನಗಳು
ಚಂಡೀಗಡ: ಜಾಟ್ ಸಮುದಾಯ ಮೀಸಲಾತಿ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಹಿಂಸಾಚಾರಕ್ಕೆ ಮತ್ತೆ ಮೂವರು ಬಲಿಯಾಗುವುದರೊಂದಿಗೆ ಸಾವಿನ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
ಜಾಟ್ ಸಮುದಾಯ ಮೀಸಲಾತಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ಪರೀಶಿಲನೆ ಸಮಿತಿ ರಚಿಸಲಾಗಿದ್ದರೂ, ಪ್ರತಿಭಟನೆ ನಿಂತಿಲ್ಲ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿ ದಿನ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ.
ಜಾಟ್ ಸಮುದಾಯವನ್ನು ಹಿಂದುಳಿದ ವರ್ಗಗಳಿಗೆ ಸೇರ್ಪಡೆ ಮಾಡಬೇಕು ಎಂದು ಕಳೆದ 9 ದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನಾಕಾರರ ಆಕ್ರೋಶಕ್ಕೆ ಅಂಗಡಿ ಮುಂಗಟ್ಟುಗಳು, ವಾಹನಗಳು ಸುಟ್ಟು ಭಸ್ಮವಾಗಿದೆ. ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, 186 ಮಂದಿ ಗಾಯಗೊಂಡಿದ್ದಾರೆ.
ರಸ್ತೆ ತಡೆಯನ್ನು ತೆರವುಗೊಳಿಸಲು ಬಂದ ಭದ್ರತಾ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನಲೆಯಲ್ಲಿ ಐದು ಗ್ರಾಮಗಳಲ್ಲಿ ಕರ್ಪ್ಯೂ ಹೇರಲಾಗಿದ್ದು, ಕಂಡ ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸಲಾಗಿದೆ.
ಇನ್ನು ಖಾಸಗಿ ಆಸ್ತಿ ನಷ್ಟವನ್ನು ಭರಿಸಲು ಹರಿಯಾಣ ಸರ್ಕಾರ ತೀರ್ಮಾನಿಸಿದ್ದು, ಹಿಂಸಾಚಾರದಲ್ಲಿ ಮೃತಪಟ್ಟವರಿಗೆ 10 ಲಕ್ಷ ಪರಿಹಾರ ಹಾಗೂ ಕುಟುಂಬದ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಲು ನಿರ್ಧರಿಸಿದೆ.