ಮುಂಬೈ: ಜಾನ್ಸನ್ ಬೇಬಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಗೆ ಬಲಿಯಾದ ಮಹಿಳೆಯೊಬ್ಬರ ಕುಟುಂಬಕ್ಕೆ ಸಂಸ್ಥೆ 72 ಮಿಲಿಯನ್ ಡಾಲರ್ ಪರಿಹಾರ ನೀಡಬೇಕು ಎಂದು ಯುಎಸ್ ತೀರ್ಪುಗಾರರು ಆದೇಶ ನೀಡಿದ್ದಾರೆ. ಈ ಆದೇಶದಿಂದ 2013 ರಲ್ಲಿ ಮಹಾರಾಷ್ಟ್ರದಲ್ಲಿದ್ದ ಜಾನ್ಸನ್& ಜಾನ್ಸನ್ ಘಟಕದ ಪರವಾನಗಿ ರದ್ದುಗೊಳಿಸಿದ್ದ ಎಫ್ ಡಿಎ ಅಧಿಕಾರಿ ಮಹೇಶ್ ಜಗಾಡೆ ಅವರಿಗೂ ರಿಲೀಫ್ ದೊರೆತಂತಾಗಿದೆ.
ಜಾನ್ಸನ್ ಬೇಬಿ ಪೌಡರ್ ನಲ್ಲಿ ಹಾನಿಕರ ಅಂಶಗಳು ಪತ್ತೆಯಾಗಿದ್ದ ಕಾರಣ 2013 ರಲ್ಲಿ ಮಹಾರಾಷ್ಟ್ರದಲ್ಲಿದ್ದ ಜಾನ್ಸನ್& ಜಾನ್ಸನ್ ಘಟಕದ ಪರವಾನಗಿಯನ್ನು ಮಹೇಶ್ ಜಗಾಡೆ ರದ್ದುಗೊಳಿಸಿದ್ದರು. ಈ ಪ್ರಕರಣ ಐಎಎಸ್ ಅಧಿಕಾರಿಗಳು ವಿದೇಶಿ ಕಂಪನಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿತ್ತು. ಆದರೆ 2015 ರಲ್ಲಿ ಅಮೇರಿಕಾದ ಅಲಬಾಮಾದಲ್ಲಿ ದಶಕಗಳಿಂದ ಜಾನ್ಸನ್ ಬೇಬಿ ಪೌಡರ್ ನ್ನು ಬಳಕೆ ಮಾಡಿದ್ದ ಮಹಿಳೆಯೊಬ್ಬರು ಕ್ಯಾನ್ಸರ್ ಗೆ ತುತ್ತಾಗಿದ್ದು ಇದಕ್ಕೆ ಜಾನ್ಸನ್ ಉತ್ಪನ್ನಗಳಲ್ಲಿದ್ದ ಹಾನಿಕಾರಕ ಅಂಶಗಳೇ ಕಾರಣ ಎಂದು ಆಕೆಯ ಕುಟುಂಬ ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿತ್ತು.
ಪ್ರಕರಣದ ಕುರಿತಾದ ತೀರ್ಪಿನ ಬಗ್ಗೆ ಮಾತನಾಡಿರುವ ಮಹೇಶ್ ಜಗಾಡೆ, ಜಾನ್ಸನ್& ಜಾನ್ಸನ್ ಕುರಿತಾದ ತೀರ್ಪು ನನ್ನ ನಡೆಯನ್ನು ಸಮರ್ಥಿಸುತ್ತದೆ ಎಂದು ಹೇಳಿದ್ದಾರೆ. ಜಾನ್ಸನ್ ಸಂಸ್ಥೆ ಬೇಬಿ ಪೌಡರ್ ನಲ್ಲಿ ಕ್ರಿಮಿನಾಶಕಕ್ಕಾಗಿ ಅನಧಿಕೃತ ಪ್ರಕ್ರಿಯೆ ಅನುಸರಿಸುತ್ತಿತ್ತು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರವಾನಗಿ ರದ್ದುಗೊಳಿಸಲಾಗಿತ್ತು.
ಬೇಬಿ ಪೌಡರ್ ನಲ್ಲಿರುವ ಬ್ಯಾಕ್ಟೀರಿಯಾ ಗಳನ್ನು ನಾಶಗೊಳಿಸಲು ಸಂಸ್ಥೆ ಬಳಸುತ್ತಿದ್ದ ಎಥಿಲೀನ್ ಆಕ್ಸೈಡ್ ನಿಂದ ಅಂಡಾಶಯ ಕ್ಯಾನ್ಸರ್ ಎದುರಾಗುವ ಅಪಾಯ ಇತ್ತು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಎಫ್ ಡಿಎ ಅಧಿಕಾರಿ ಮಹೇಶ್ ಜಗಾಡೆ ಮಹಾರಾಷ್ಟ್ರದ ಜಾನ್ಸನ್& ಜಾನ್ಸನ್ ಘಟಕದ ಪರವಾನಗಿ ರದ್ದುಗೊಳಿಸಿದ್ದರು.