ಬೆಂಗಳೂರು: ಜಿಎಸ್‍ಟಿ, ವ್ಯಾಟ್ ಸೇರಿದಂತೆ ವಾಣಿಜ್ಯ ತೆರಿಗೆ ಇಲಾಖೆ ವೆಬ್ ಸೈಟ್ನಲ್ಲಿ ಸಿಗುವ ಎಲ್ಲಾ ಅರ್ಜಿಗಳನ್ನು ಕನ್ನಡದಲ್ಲಿ ಲಭ್ಯವಾಗುವಂತೆ ಕ್ರಮಕೈಗೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಲ್. ಹನುಮಂತಯ್ಯ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಆಡಳಿತದ ಎಲ್ಲಾ ಹಂತದಲ್ಲೂ ಕನ್ನಡವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿರುವ ಬಗ್ಗೆ ಬುಧವಾರ ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಇಲಾಖೆಯಲ್ಲಿ ಎಲ್ಲಾ ಹಂತಗಳಲ್ಲೂ ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕು, ಆನ್‍ಲೈನ್‍ನಲ್ಲಿ ಎಲ್ಲವೂ ಇಂಗ್ಲಿಷ್‍ನಲ್ಲಿವೆ ಎಂಬ ದೂರುಗಳಿವೆ. ಹೀಗಾಗಿ ಇಲಾಖೆ ಎಲ್ಲ ವಿಭಾಗಗಳಲ್ಲೂ ಕನ್ನಡ ಅನುಷ್ಠಾನಗೊಳಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು. ನೋಂದಣಿ ಪತ್ರ, ಸ್ವೀಕೃತಿ ಪತ್ರ ಕೂಡ ಇಂಗ್ಲಿಷ್ ನಲ್ಲಿದೆ. ಪ್ರಾಥಮಿಕ ಹಂತದಲ್ಲೇ ಬದಲಾವಣೆ ತರಬೇಕು, ಇದನ್ನು ಗ್ರಾಹಕರು ಮತ್ತು ಅಧಿಕಾರಿಗಳು ಬಳಸಿಕೊಳ್ಳಬೇಕು.
ಟಿಪ್ಪಣಿ ಮತ್ತು ಅರ್ಜಿ ಕೂಡ ಕನ್ನಡದಲ್ಲಿರಬೇಕು, ಈಗಾಗಲೇ ನಾಮ ಫಲಕ ಹಾಜರಾತಿ, ಪ್ರಕಟಣೆಗಳು ಕನ್ನಡದಲ್ಲಿದ್ದು ಉಳಿದವು ಕೂಡ ಕನ್ನಡದಲ್ಲಿರುವಂತೆ ಮಾಡಬೇಕು ಎಂದರು. ವಾಣಿಜ್ಯ ತೆರಿಗೆಗೆ ಸಂಬಂಧಿಸಿದಂತೆ ರಾಜ್ಯದೆಲ್ಲೆಡೆ ಇರುವ ತರಬೇತಿ ಕೇಂದ್ರಗಳಲ್ಲೂ ಕನ್ನಡ ಕಡ್ಡಾಯವಾಗ ಬೇಕಿದೆ ಮಾಹಿತಿ ಹಕ್ಕಿನಡಿಯಲ್ಲಿ ಇಲಾಖೆ ನೀಡುವ ಉತ್ತರ ಕೂಡ ಕನ್ನಡದಲ್ಲಿರಬೇಕು. ಕಡತಗಳನ್ನು ಪರಿಶೀಲಿಸಿದ ನಂತರ ಕನ್ನಡ ಬಳಕೆ ಮಾಡದಿರುವ ಅಧಿಕಾರಿಗಳ ಪಟ್ಟಿ ಮಾಡಲಾಗುತ್ತದೆ.
ನಂತರವೂ ಇದೇ ಪರಿಪಾಠ ಮುಂದುವರೆದರೆ ಅಧಿಕಾರಿಗಳ ಬಡ್ತಿಯನ್ನು ತಡೆ ಹಿಡಿಯುವ ಅಧಿಕಾರ ಕಾನೂನಿಗಿದೆ ಎಂದು ಎಚ್ಚರಿಸಿದರು. ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ರಿತ್ವಿಕ್ ಪಾಂಡೆ ಮಾತನಾಡಿ, ಈಗಾಗಲೇ ಸಾಧ್ಯವಾದಷ್ಟು ಕನ್ನಡ ಅನುಷ್ಠಾನಗೊಳಿಸಿದ್ದೇವೆ. ವೃತ್ತಿ ತೆರಿಗೆಯಿಂದ ರು.1 ಸಾವಿರ ಕೋಟಿ ಆದಾಯಗಳಿಸಿದ್ದೇವೆ, ರು.32ಸಾವಿರ ಕೋಟಿ ಆದಾಯ ತೆರಿಗೆ ಸಂಗ್ರಹವಾಗುವ ಸಾಧ್ಯತೆ ಇದೆ ಎಂದರು.