ಲಂಡನ್: ನೇತಾಜಿ ಸುಭಾಶ್ಚಂದ್ರ ಬೋಸ್ ಅವರು 1945ರ ವಿಮಾನಾಪಘಾತದಲ್ಲಿ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯನ್ನು ತಾವೇ ಮಾಡಿರುವುದಾಗಿ ತೈವಾನ್ನ ಅಧಿಕಾರಿ ನೀಡಿರುವ ವಿವರಗಳನ್ನು www.bosefile.info ವೆಬ್ ಸೈಟ್ ಗುರುವಾರ ಬಿಡುಗಡೆ ಮಾಡಿದೆ.
ಸುಭಾಶ್ಚಂದ್ರ ಬೋಸ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಕುರಿತು ತೈವಾನ್ ಅಧಿಕಾರಿಯು ನೀಡಿದ್ದ ಸಾಕ್ಷ್ಯವನ್ನು ಒಳಗೊಂಡ ಅಂಶಗಳು ಬ್ರಿಟನ್ ವಿದೇಶ ಕಾರ್ಯಾಲಯದಲ್ಲಿನ ಎಫ್ಸಿ 1852/6 ಕಡತದಲ್ಲಿದೆ. ಇದು 1956ರಷ್ಟು ಹಳೆಯ ಕಡತವಾಗಿದೆ. ಬೋಸ್ ಕುರಿತು ಬ್ರಿಟನ್ ವೆಬ್‌ಸೈಟ್ ಬಿಡುಗಡೆ ಮಾಡಿರುವ ಕೊನೆಯ ಕೆಲವು ದಾಖಲೆಗಳು ಇವಾಗಿವೆ.
ನೇತಾಜಿ ಸುಭಾಶ್ಚಂದ್ರ ಬೋಸ್ ಅವರು 1945ರ ಆಗಸ್ಟ್ 18ರಂದು ತೈಪೇ ವಾಯುನೆಲೆಯ ಹೊರವಲಯದಲ್ಲಿ ಸಂಭವಿಸಿದ್ದ ವಿಮಾನಾಪಘಾತದಲ್ಲಿ ಮೃತಪಟ್ಟರೆಂಬುದನ್ನು ಈ ವರೆಗೂ ಬ್ರಿಟನ್, ಜಪಾನ್ ಹಾಗೂ ಭಾರತ ಸರಕಾರ ಹೇಳತ್ತಲೇ ಬಂದಿದ್ದು ಇದೀಗ ಬ್ರಿಟನ್ ವೆಬ್‌ಸೈಟ್ ನೇತಾಜಿ ಅವರ ಸಾವಿನ ಬಗ್ಗೆ ಇದಕ್ಕೆ ಹೊರತಾಗಿ ಯಾವುದೇ ಅನ್ಯ ಸಂದೇಹವಿಲ್ಲ ಎಂಬುದನ್ನು ಸಾಬೀತು ಪಡಿಸುವ ರೀತಿಯಲ್ಲಿ ಈ ದಾಖಲೆಗಳನ್ನು ಬಹಿರಂಗಪಡಿಸಿದೆ.
ತೈಪೆಯಲ್ಲಿ ಪಾರ್ಥಿವ ಶರೀರಗಳ ಅಂತ್ಯಕ್ರಿಯೆಗೆ ಅನುಮತಿ ಪತ್ರ ನೀಡುವ ಅಧಿಕಾರ ಹೊಂದಿದ್ದ ತೈವಾನ್ ಅಧಿಕಾರಿ ತಾನ್ ತೀ ತೀ ಅವರು ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಮೃತ ದೇಹದ ಅಂತ್ಯಕ್ರಿಯೆ ತಾನೇ ಖುದ್ದು ಅಣಿಗೊಳಿಸಿದ್ದಾಗಿ ಹೇಳಿದ್ದಾರೆ. ತನ್ಮೂಲಕ ನೇತಾಜಿ ಸಾವಿನ ಕುರಿತಾದ ಎಲ್ಲ ಸಂದೇಹಗಳಿಗೆ ಅವರು ತೆರೆ ಎಳೆದಂತಾಗಿದೆ ಎಂದು ಬ್ರಿಟನ್ ವೆಬ್‌ಸೈಟ್ ಹೇಳಿದೆ.