ನವದೆಹಲಿ: ಇಂಡೋ-ಚೀನಾ ಗಡಿ ಭಾಗದ ಮೇಲಿನ ಕಣ್ಗಾವಲಿಗಾಗಿ ವಿಯೆಟ್ನಾಂ ನಲ್ಲಿ ಸ್ಯಾಟೆಲೈಟ್ ಟ್ಯ್ರಾಕಿಂಗ್ ಸಿಸ್ಟಂ ಅನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಪ್ರಾಬಲ್ಯ ಸಾಧಿಸಲು ತನ್ನ ಜಲಾಂತರ್ಗಾಮಿಗಳನ್ನು ರವಾನಿಸುವ ಮೂಲಕ ಪ್ರಚೋದಿಸುತ್ತಿರುವ ಚೀನಾದ ಡ್ರ್ಯಾಗನ್ ಸೇನೆಗೆ ಭಾರತ ದಿಟ್ಟ ಉತ್ತರ ನೀಡಿದ್ದು, ಇಂಡೋ-ಚೀನಾ ಗಡಿ ಮತ್ತು ದಕ್ಷಿಣ ಹಿಂದೂ ಮಹಾಸಾಗರದ ಮೇಲೆ ಕಣ್ಗಾವಲು ಮಾಡುವ ಸಲುವಾಗಿ ವಿಯೆಟ್ನಾಂ ನಲ್ಲಿ ಸ್ಯಾಟೆಲೈಟ್ ಟ್ರಾಕಿಂಗ್ ಸಿಸ್ಟಂ ಅನ್ನು ಅಳವಡಿಸಲು ಮುಂದಾಗಿದೆ. ಮೂಲಗಳ ಪ್ರಕಾರ ಈ ಯೋಜನೆಗೆ ಈಗಾಗಲೇ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ವಿಯೆಟ್ನಾಂ ಸರ್ಕಾರ ಕೂಡ ತನ್ನ ನೆಲದಲ್ಲಿ ಭಾರತ ಸ್ಯಾಟೆಲೈಟ್ ಟ್ಯ್ರಾಕಿಂಗ್ ಸಿಸ್ಟಂ ಕೇಂದ್ರ ಸ್ಥಾಪನೆ ಮಾಡಲು ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ.
ಭಾರತ ಮತ್ತು ವಿಯೆಟ್ನಾಂ ನ ಈ ನಡೆ ಚೀನಾ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಮೂರು ದೇಶಗಳು ಈ ವಿವಾದಿತ ಪ್ರದೇಶದ ಮೇಲೆ ಹಿಡಿತ ಸಾಧಿಸಲು ದಶಕಗಳಿಂದ ಪ್ರಯತ್ನಿಸುತ್ತಿವೆ. ಪ್ರಸ್ತುತ ಭಾರತ ಸರ್ಕಾರ ಕೈಗೊಂಡಿರುವ ಈ ನಿಲುವು ಬೀಜಿಂಗ್-ನವದೆಹಲಿ ಮತ್ತು ಬೀಜಿಂಗ್-ಹನೋಯ್ ನಡುವಿನ ಮಾತುಕತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
ತಜ್ಞರ ಪ್ರಕಾರ ಭಾರತ ಸರ್ಕಾರ ಸ್ಥಾಪಿಸಲು ಮುಂದಾಗಿರುವ ಈ ಸ್ಯಾಟೆಲೈಟ್ ಟ್ರಾಕಿಂಗ್ ಸಿಸ್ಟಂ ಕೇಂದ್ರ ಪ್ರಮುಖವಾಗಿ ಭಾರತೀಯ ಗಡಿಗಳ ಮೇಲೆ ಮತ್ತು ಸಮುದ್ರ ಗಡಿಗಳ ಮೇಲೆ ಕಣ್ಗಾವಲಿಡಲಿದ್ದು, ಕೃಷಿ ಮತ್ತು ವೈಜ್ಞಾನಿಕ ಉದ್ದೇಶಗಳಿಗೂ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೆ ಮಿಲಿಟರಿ ಉದ್ದೇಶಗಳಿಗಾಗಿಯೂ ಈ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ ಎಂದು ತಜ್ಞರು ಹೇಳಿದ್ದಾರೆ. ಪ್ರಮುಖವಾಗಿ ವಿಯೆಟ್ನಾಂ ಸರ್ಕಾರ ಮಿಲಿಟರಿ ಉದ್ದೇಶಕ್ಕಾಗಿ ಅತ್ಯಾಧುನಿಕ ಗುಪ್ತಚರ, ಕಣ್ಗಾವಲು ವಿಚಕ್ಷಣ ತಂತ್ರಜ್ಞಾನಗಳಿಗಾಗಿ ಹಾತೊರೆಯುತ್ತಿದ್ದು, ಚೀನಾ ಮತ್ತು ವಿಯೆಟ್ನಾಂ ನಡುವಿನ ಸಂಬಂಧ ಇದೀಗ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಈ ಬಗ್ಗೆ ಮಾತನಾಡಿರುವ ಸಾಗರ ಭದ್ರತಾ ತಜ್ಞ ಮತ್ತು ಸಿಂಗಾಪುರದ ರಾಜರತ್ನಂ ಸ್ಕೂಲ್ ಆಫ್ ಇಂಟರ್ ನ್ಯಾಷನಲ್ ಸ್ಟಡೀಸ್ ಮುಖ್ಯಸ್ಥ ಕೊಲ್ಲಿನ್ ಕೊಹ್ ಅವರು, ಭದ್ರತೆಯ ದೃಷ್ಟಿಯಿಂದ ನೋಡುವುದಾದರೆ ಭಾರತ ಮತ್ತು ವಿಯೆಟ್ನಾಂನ ಈ ನಿರ್ಧಾರ ನಿಜಕ್ಕೂ ಗಮನಾರ್ಹವಾಗಿದೆ. ಮೇಲ್ನೋಟಕ್ಕೆ ಈ ಯೋಜನೆಯಿಂದ ವಿಯೆಟ್ನಾಮಿಗರಿಗೇ ಅನುಕೂಲ ಎಂಬಂತೆ ಕಾಣುತ್ತದೆ. ಆದರೆ ಭಾರತೀಯರೂ ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೂಲಗಳು ತಿಳಿಸಿರುವಂತೆ ವಿಯೆಟ್ನಾಂನ ಹೋಚಿಮನ್ಹ್ ನಗರದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸುಮಾರು 23 ಮಿಲಿಯನ್ ಡಾಲರ್ (ಸುಮಾರು 155 ಕೋಟಿ ರು.) ವೆಚ್ಚದಲ್ಲಿ ಸ್ಯಾಟೆಲೈಟ್ ಟ್ರಾಕಿಂಗ್ ಸಿಸ್ಟಮ್ ಕೇಂದ್ರವನ್ನು ಸ್ಥಾಪಿಸಲಿದೆ. ಪ್ರತೀ ತಿಂಗಳು ಈ ಕೇಂದ್ರದಿಂದ ಒಂದೊಂದು ಸ್ಯಾಟೆಲೈಟ್ ಗಳನ್ನು ಲಾಂಚ್ ಮಾಡಲು ಉದ್ದೇಶಿಸಲಾಗಿದೆ. ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ, ಬ್ರೂನೇ, ಪೂರ್ವ ಇಂಡೋನೇಷ್ಯಾದ ಬಿಯಾಕ್ ಮತ್ತು ಮಾರಿಷಸ್ ನಲ್ಲಿ ಇದರ ನಿಯಂತ್ರಣ ಕೇಂದ್ರಗಳು ಸ್ಥಾಪನೆಯಾಗಲಿವೆ ಎಂದು ತಿಳಿದುಬಂದಿದೆ.