ಬೆಂಗಳೂರು: ಆರೋಗ್ಯ ಕವಚ (108 ಆ್ಯಂಬುಲೆನ್ಸ್) ಸಿಬ್ಬಂದಿಯ ಮುಷ್ಕರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಾವಿರಕ್ಕೂ ಹೆಚ್ಚು ಹೋರಾಟನಿರತರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಈ ನಡುವೆಯೇ ಸಿಬ್ಬಂದಿಯ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿರುವುದಾಗಿ ಸರ್ಕಾರ ಹೇಳಿದೆ.
ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಆರೋಗ್ಯ ಕವಚದ ಸಿಬ್ಬಂದಿ ಮಾಜಿ ಸಚಿವ ಗೂಳಿಹಟ್ಟಿ ನೇತೃತ್ವದಲ್ಲಿ ಬುಧವಾರ ಮಧ್ಯಾಹ್ನ ಪೊರಕೆ ಹಿಡಿದು ರಸ್ತೆಗಳನ್ನು ಸ್ವಚ್ಛಗೊಳಿಸುತ್ತಾ ವಿಧಾನಸೌಧ ಕಡೆಗೆ ಮೆರವಣಿಗೆಗೆ ಮುಂದಾದರು.
ಈ ಸಂದರ್ಭದಲ್ಲಿ ಅವರನ್ನು ತಡೆದ ಪೊಲೀಸರು ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಬಂಧಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶ್ರೀಶೈಲ ಯಾವುದೇ ಕಾರಣಕ್ಕೂ ಮುಷ್ಕರ ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿದರು.
ಈ ಮುಷ್ಕರದ ಹಿನ್ನೆಲೆಯಲ್ಲಿ ವಿಕಾಸಸೌಧದಲ್ಲಿ ಬುಧವಾರ ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ 108 ಮುಖ್ಯಸ್ಥರುಗಳ ಜತೆ ವೀಡಿಯೋ ಕಾನ್ಫೆರೆನ್ಸ್ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು, ರಾಜ್ಯದಲ್ಲಿ ಮುಷ್ಕರಕ್ಕೆ ಮುಂದಾಗಿರುವ ಸಿಬ್ಬಂದಿಗಳಿಗಿಂತ ನಾಗರಿಕರ ಸಮಸ್ಯೆ ದೊಡ್ಡದು. ಈ ಹಿನ್ನೆಲೆಯಲ್ಲಿ ಸಮಸ್ಯೆ ಎದುರಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ ಎಂದು ತಿಳಿಸಿದರು. ಕಳೆದ ಎರಡು ತಿಂಗಳಿನಲ್ಲಿ ಸಂಬಂಳ ನೀಡಲು ತಾಂತ್ರಿಕ ತೊಂದರೆಗಳಿಂದ ಸಮಸ್ಯೆಯಾಗಿರುವುದು ನಿಜ. 108 ಸಿಬ್ಬಂದಿ ಬೇಡಿಕೆ ಈಡೇರಿಸಲು ಇಲಾಖೆ ಸಿದ್ಧವಿದ್ದು, ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ. ಇದಕ್ಕೆ ಒಪ್ಪದ ಸಿಬ್ಬಂದಿ ಮುಷ್ಕರಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.
ವೀಡಿಯೋ ಕಾನ್ಫೆರೆನ್ಸ್ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಲಾಗಿದೆ. ಎಲ್ಲಿಯೂ 108 ಆ್ಯಂಬುಲೆನ್ಸ್ ಗಳ ಬಗ್ಗೆ ಸಮಸ್ಯೆ ಕೇಳಿ ಬಂದಿಲ್ಲ. ಇಲಾಖೆಯ ವಾಹನದ ಕೀ ಮತ್ತು ಮೊಬೈಲ್ ಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಒಪ್ಪಿಸಿ ಮುಷ್ಕರದಲ್ಲಿ ಪಾಲ್ಗೊಂಡರೆ ಯಾವುದೇ ಅಭ್ಯಂತರವಿಲ್ಲ ಎಂದರು. ಇದೇ ವೇಳೆ ಮಧ್ಯಾಹ್ನ ಬಂಧಿಸಲಾಗಿದ್ದ ಪ್ರತಿಭಟನಾನಿರತರನ್ನು ರಾತ್ರಿ ಬಿಡುಗಡೆ ಮಾಡಲಾಗಿದೆ.
ಜಿಪಿಎಸ್ ಅಳವಡಿಕೆ
ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ದಾಖಲಿಸುತ್ತಿರುವ ಪ್ರಕರಣಗಳಿಗೆ ಕಡಿವಾಣಕ್ಕೆ ಮುಂದಾಗಿದ್ದು 108 ವಾಹನಗಳಿಗೆ ನೂತನವಾಗಿ ಜಿಪಿಎಸ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದರಿಂದ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸದಿದ್ದರೆ ತಿಳಿದು ಬರಲಿದೆ. ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಲಲು ಇಲಾಖೆಗೆ ಸಹಾಯವಾಗಲಿದೆ ಎಂದು ಹೇಳಿದರು.
ಪರ್ಯಾಯ ಕ್ರಮವೇನು? ಈಗಾಗಲೇ ಉತ್ತರ ಕರ್ನಾಟಕದಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಚಾಲಕರನ್ನು 108 ವಾಹನಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಮತ್ತಷ್ಟು ಚಾಲಕರನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಚಾಲಕರಿಗೆ ಡಬ್ಬಲ್ ಡ್ಯೂಟಿ ನೀಡಬೇಡಿ, ಮುಂದಿನ ಎರಡು ದಿನ ಐ ಅಲರ್ಟ್ ಆಗಿದ್ದು, ಉತ್ತಮ ಚಿಕಿತ್ಸೆ ಸಿಗುವಂತೆ ಜಾಗ್ರತೆ ವಹಿಸಬೇಕು. ನಾಗರಿಕರಿಗೆ ತೊಂದರೆಯಾದರೆ ಜಿಲ್ಲಾ ಆರೋಗ್ಯಾಧಿಕಾರಿಗಳೇ ಹೊಣೆ ಎಂದು ಎಚ್ಚರಿಕೆ ನೀಡಲಾಗಿದೆ.
ಆರೋಗ್ಯ ಇಲಾಖೆ ವಾದವೇನು?
108 ವಾಹನದ ಚಾಲಕಲರು ಮುಖಕ್ಷೌರ ಮಾಡುವುದಿಲ್ಲ. ಸಮವಸ್ತ್ರ ಧರಿಸುವುದಿಲ್ಲ. ವಾಹನ ಸ್ವಚ್ಛತೆ ಕಾಪಾಡುವುದಿಲ್ಲ. ಡೀಸೆಲ್ ಕಳ್ಳತನ, ರಾತ್ರಿ ವೇಳೆ ಮೊಬೈಲ್ ಗಳನ್ನು ಸ್ವಿಚ್ಡ್ ಆಫ್ ಮಾಡುವುದು, ವಿಧಾನಸೌಧದ ಆಸುಪಾಸಿನಲ್ಲೇ ಸುತ್ತಾಡುತ್ತಾರೆ. ಕರ್ತವ್ಯ ಕೈ ಹಾಜರಾಗಿಲ್ಲದಿರುವ ಬಗ್ಗೆ ಕೇಳಿದರೆ ಮತ್ತೊಬ್ಬರನ್ನು ನೇಮಕ ಮಾಡಿದ್ದೇವೆ ಎನ್ನುತ್ತಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಬದಲಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸುತ್ತಾರೆ. ನರ್ಸ್ ಗಳು ರೋಗಿಗಳ ಬಳಿ ಇರುವುದಿಲ್ಲ ಎಂಬ ದೂರುಗಳಿವೆ.