ಮುಂಬೈ: ಬಹುಕೋಟಿ ಆದರ್ಶ ಗೃಹ ನಿರ್ಮಾಣ ಹಗರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡುವಂತೆ ಸಿಬಿಐ ಅಧಿಕಾರಿಗಳು ಮಹಾರಾಷ್ಟ್ರ ಸರ್ಕಾರದ ಅನುಮತಿ ಕೋರಿದ್ದಾರೆ.
ಹಗರಣದಲ್ಲಿ ಹೊಸ ಸಾಕ್ಷ್ಯ ಸಿಕ್ಕಿದ್ದು, ಚವ್ಹಾಣ್ ರನ್ನು ತನಿಖೆಗೊಳಪಡಿಸಲು ಸಿಬಿಐ ನಿರ್ಧರಿಸಿದೆ. ಹೀಗಾಗಿ ಮಹಾರಾಷ್ಟ್ರ ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಅವರಿಗೆ ಮಹಾರಾಷ್ಟ್ರ ಸಚಿವ ಸಂಪುಟ ಗುರುವಾರ ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ. ಹಗರಣಕ್ಕೆ ಸಂಬಂಧಿಸಿದಂತೆ ಚವಾಣ್ ವಿರುದ್ಧ ಹೊಸ ಸಾಕ್ಷ್ಯ ಲಭಿಸಿದ್ದು, ತನಿಖೆಗೆ ಅವಕಾಶ ನೀಡಬೇಕು ಎಂದು ರಾಜ್ಯಪಾಲರಿಗೆ ಸಿಬಿಐ ಮನವಿ ಮಾಡಿತ್ತು.
ಈ ಬಗ್ಗೆ ಸಂಪುಟದ ಅಭಿಪ್ರಾಯ ತಿಳಿಸುವಂತೆ ರಾಜ್ಯಪಾಲರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಸೂಚಿಸಿದ್ದರು. ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಟೀಕಿಸಿದೆ. ಮಹಾರಾಷ್ಟ್ರ ಸಚಿವ ಸಂಪುಟ ಶಿಫಾರಸ್ಸು ಹಿನ್ನಲೆಯಲ್ಲಿ ಮಾಜಿ ಸಿಎಂ ಚವ್ಹಾಣ್ ರನ್ನು ಸಿಬಿಐ ಅಧಿಕಾರಿಗಳು ಹೆಚ್ಚಿನ ವಿಚಾರಣೆ ಸಂಬಂಧ ವಶಕ್ಕೆ ಪಡೆಯುವ ಸಾಧ್ಯತೆಯಿದೆ.