ಢಾಕಾ: ಇಸ್ಲಾಮ್ ಧರ್ಮದ ವಿವಾದಾತ್ಮಕ ಪ್ರಚಾರಕ ಜಾಕಿರ್ ನಾಯಕ್ ಅವರ ಇಸ್ಲಾಮ್ ಧರ್ಮದ ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬಾಂಗ್ಲಾದೇಶದ ಸರ್ಕಾರ ತಿಳಿಸಿದೆ.
ಢಾಕಾದಲ್ಲಿ ದಾಳಿ ನಡೆಸಿದ ಉಗ್ರರಿಗೆ ಸ್ಫೂರ್ತಿಯಾಗಿರುವ ಜಾಕಿರ್ ನಾಯಕ್ ನ ಪೀಸ್ ಟಿವಿ ಚಾನೆಲ್ ನ್ನು ನಿಷೇಧಿಸುವ ಬಗ್ಗೆಯೂ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಬಾಂಗ್ಲಾದೇಶದ ಗೃಹ ಸಚಿವ ಸಾದುಜ್ಜಮಾನ್ ಖಾನ್ ತಿಳಿಸಿದ್ದಾರೆ.
ಉಗ್ರರಿಗೆ ಸ್ಫೂರ್ತಿಯಾಗಿರುವ ಜಾಕಿರ್ ನಾಯಕ್ ಮೇಲೆ ಬಾಂಗ್ಲಾದೇಶದ ಗುಪ್ತಚರ ಇಲಾಖೆಗಳು ಕಣ್ಣಿಟ್ಟಿದ್ದು, ಆತನ ಚಲನವಲನಗಳನ್ನು ಗಮನಿಸುತ್ತಿವೆ ಎಂದು ಬಾಂಗ್ಲಾ ಸಚಿವರು ತಿಳಿಸಿದ್ದಾರೆ.ಜಾಕಿರ್ ನಾಯಕ್ ನ ಚಲನವಲನಗಳಷ್ಟೇ ಅಲ್ಲದೆ ಬಾಂಗ್ಲಾದೇಶದಲ್ಲಿ ಜಾಕಿರ್ ನಾಯಕ್ ನ ಹಣದ ವಹಿವಾಟಿನ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ, ಜಾಕಿರ್ ನಾಯಕ್ ನ ಪೀಸ್ ಟಿವಿ ಚಾನಲ್ ನ್ನು ನಿಷೇಧಿಸುವುದಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ಮತ್ತಷ್ಟು ಕಾಲಾವಕಾಶ ಬೇಕು ಎಂದು ಬಾಂಗ್ಲಾ ಗೃಹ ಸಚಿವ ಖಾನ್ ಮಾಹಿತಿ ನೀಡಿದ್ದಾರೆ.
ಇನ್ನು ಜಾಕಿರ್ ನಾಯಕ್ ನ ಪೀಸ್ ಟಿವಿ ಕುರಿತು ಅಲ್ಲಿನ ಕೇಬಲ್ ಮಾಲೀಕರ ಸಂಘದ ಅಧ್ಯಕ್ಷ ಮೀರ್ ಹುಸೇನ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದು ಈ ಹಿಂದೆ ನಾನು ಸಹ ಪೀಸ್ ಟಿವಿ ಚಾನಲ್ ನ್ನು ನೋಡುತ್ತಿದ್ದೆ. ಆದರೆ ದಾಳಿ ನಡೆದು ಉಗ್ರರಿಗೆ ಜಾಕಿರ್ ನಾಯಕ್ ಸ್ಫೂರ್ತಿಯಾಗಿದ್ದ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಚಾನಲ್ ನೋಡುವುದನ್ನು ಬಿಟ್ಟೆ, ತಕ್ಷಣವೇ ಚಾನಲ್ ನ್ನು ಪ್ರಸಾರ ಮಾಡುವುದನ್ನು ಸ್ಥಗಿತಗೊಳಿಸಬೇಕೆಂಬ ಅಭಿಪ್ರಾಯವಿದೆಯಾದರು ಸರ್ಕಾರದ ನಿರ್ದೇಶನ ಬರುವವರೆಗೂ ಆ ರೀತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.