ಚೆನ್ನೈ: ತಮಿಳುನಾಡಿನ ವಿವಿಧ ಪ್ರದೇಶಗಳಲ್ಲಿ 23476 ಮನೆಗಳನ್ನು ನಿರ್ಮಿಸಲು ಮುಖಮಂತ್ರಿ ಜೆ ಜಯಲಲಿತಾ ಸ್ಲಮ್ ನಿರ್ಮೂಲನಾ ಮಂಡಳಿಗೆ ಅನುಮೋದನೆ ನೀಡಿದ್ದಾರೆ. 300 ಚದರಡಿ ಜಾಗದಲ್ಲಿ ಪ್ರತ್ಯೇಕ ಮನೆ ನಿರ್ಮಿಸಲು ಇಚ್ಛಿಸುವ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಸರ್ಕಾರ 2.10 ಲಕ್ಷ ರು ಅನುದಾನ ನೀಡಲಿದೆ.
ನಿರ್ಮಾಣವಾಗಲಿರುವ 23,476 ಮನೆಗಳಲ್ಲಿ 2704 ಮನೆಗಳು ಚೆನ್ನೈ, ತಂಜಾವೂರು, ತಿರುಚಿ, ಈರೋಡ್, ಕೊಯಂಬತ್ತೂರು, ಪುದುಕೊಟ್ಟೈ, ನಾಮಕ್ಕಲ್ ಮತ್ತು ನಾಗಪಟ್ಟಣಂ ಜಿಲ್ಲೆಗಳಲ್ಲಿ ನಿರ್ಮಾಣವಾಗಲಿರುವ ಬಹುಮಹಡಿ ಕಟ್ಟಡಗಳಲ್ಲಿ ನಿರ್ಮಾಣವಾಗಲಿವೆ.
ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಚೆನ್ನೈ, ವೆಲ್ಲೂರು, ಹೊಸೂರು, ರಾಣಿಪೇಟ್, ವಿರುಧುನಗರ ಮತ್ತು ಮಧುರೈನ 157 ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಾಲೀಕರ ಒಡೆತನದ ಜಾಗಗಳಲ್ಲಿ 16272 ಪ್ರತ್ಯೇಕ ಮನೆಗಳನ್ನು ಕಟ್ಟಿಕೊಳ್ಳಲು ಸರ್ಕಾರ ಧನಸಹಾಯ ಒದಗಿಸಲಿದೆ.
ಬಹುಮಹಡಿ ಕಟ್ಟಡಗಳಲ್ಲಿ ಕಟ್ಟಲಾಗುವ ಮನೆಗಳು 400 ಚದರಡಿ ವಿಸ್ತೀರ್ಣ ಇರಲಿದ್ದು ಬಹುಪಯೋಗಿ ಕೊಠಡಿ, ಮಲಗುವ ಕೊಠಡಿ, ಅಡಿಗೆ ಮನೆ, ಶೌಚಾಲಯ ಮತ್ತು ಬಾಲ್ಕನಿ ಒಳಗೊಳ್ಳಲಿವೆ. ಪ್ರತ್ಯೇಕ ಮನೆ ಕಟ್ಟಿಕೊಳ್ಳುವವರಿಗೆ 300 ಚದರಡಿಯಲ್ಲಿ ಮನೆ ನಿರ್ಮಿಸಿಕೊಳ್ಳಲು ಸರ್ಕಾರ 2.10 ಲಕ್ಷ ಧನ ಸಹಾಯ ಮಾಡಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಸ್ಲಮ್ ನಿರ್ಮೂಲನಾ ಮಂಡಳಿ ಕಳೆದ ಐದು ವರ್ಷಗಳಿಂದ ಬಹುಮಹಡಿ ಕಟ್ಟಡಗಳು ಮತ್ತು ಪ್ರತ್ಯೇಕ ಮನೆಗಳನ್ನು ಒಳಗೊಂಡಂತೆ ಒಟ್ಟು 59,023 ಮನೆಗಳನ್ನು ನಿರ್ಮಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics