ಪ್ರಧಾನ ಸುದ್ದಿ

ಪಾಕ್ "ಹುತಾತ್ಮ ಹೀರೋ" ಉಗ್ರ ಬುರ್ಹಾನ್ ವಾನಿಗೆ ಭಾರತೀಯ ಯೋಧನ ಬಹಿರಂಗ ಪತ್ರ!

Srinivasamurthy VN

ನವದೆಹಲಿ: ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ವ್ಯಾಪಕ ಹಿಂಸಾಚಾರ ಯುಕ್ತ ಪ್ರತಿಭಟನೆ ನಡುವೆಯೇ ಭಾರತೀಯ ಸೇನೆಯ ಯೋಧನೊಬ್ಬ ಉಗ್ರ  ಕಮಾಂಡರ್ ಗೆ ಬಹಿರಂಗ ಪತ್ರ ಬರೆಯುವ ಮೂಲಕ ಹಿಂಸಾಚಾರ ಪ್ರಚೋದಿಸುತ್ತಿರುವ "ಪ್ರತ್ಯೇಕತಾವಾದಿ"ಗಳಿಗೆ ತಮ್ಮ ಅಕ್ಷರಗಳ ಮೂಲಕ ತಿವಿದಿದ್ದಾರೆ.

ಭಾರತೀಯ ಸೇನೆಯ ಹಿರಿಯ ಅಧಿಕಾರಿ ಮೇಜರ್ ಗೌರವ್ ಆರ್ಯ ಅವರು, ಪ್ರಸ್ತುತ ಪಾಕಿಸ್ತಾನ ಸರ್ಕಾರ ಹುತಾತ್ಮ ಯೋಧ, ಹೀರೋ ಎಂದೆಲ್ಲಾ ಬಣ್ಣಿಸುತ್ತಿರುವ ಹಿಜ್ಬುಲ್ ಉಗ್ರ ಕಮಾಂಡರ್  ಬುರ್ಹಾನ್ ವಾನಿಗೆ ನೇರವಾಗಿ ಪತ್ರ ಬರೆದಿದ್ದು, ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪತ್ರದಲ್ಲಿ ಕಾಶ್ಮೀರದ ಕೆಲ ಗಂಭೀರ ಸಮಸ್ಯೆಗಳನ್ನು  ಪ್ರಸ್ತಾಪಿಸಿರುವ ಗೌರವ್ ಆರ್ಯ ಅವರು, ಜಿಹಾದ್ ಮತ್ತು ತಮ್ಮ ರಾಜಕೀಯ ಸ್ವಹಿತಾಸಕ್ತಿಗಾಗಿ ಕಾಶ್ಮೀರಿ ಯುವಕರನ್ನು ಹೇಗೆ ಬಳಸಿಕೊಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ಅಮಾಯಕ ಪ್ರಜೆಗಳ ಮಾರಣ ಹೋಮ ನಡೆಸುತ್ತಿರುವ ಗಿಲಾನಿಯಂತಹ ಪ್ರತ್ಯೇಕತಾವಾದಿಗಳಿಗೆ ಅಕ್ಷರಗಳ ಮೂಲಕ ತಿವಿದಿದ್ದಾರೆ.

ಈ ಪತ್ರದ ಪೂರ್ಣಪಾಠ ಇಲ್ಲಿದೆ...

"ಅಗಲಿದ ಆತ್ಮೀಯ, (ಉಗ್ರ ಬುರ್ಹಾನ್ ವಾನಿ)

"ಸೈನಿಕರು ನಿನ್ನನ್ನು ಬೇಟೆಯಾಡಿದ ನಂತರ ಕಣಿವೆಯಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ. ಅವರು ಏಕೆ ಸತ್ತರೋ ತಿಳಿದಿಲ್ಲ. ಸತ್ತವರ ಪೈಕಿ ಬಹುತೇಕರು ನಿನ್ನ ಸಾವಿಗೆ ಬೇಸರಗೊಂಡು,  ಆವೇಶದಿಂದ ಪ್ರತೀಕಾರ ತೀರಿಸಿಕೊಳ್ಳಲು ಬಂದಿದ್ದರು. ಆದರೆ ಅವರಿಗೆ ಪ್ರತೀಕಾರ ತೀರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಓರ್ವ ಪೊಲೀಸ್ ಅಧಿಕಾರಿಯನ್ನು ಆತ ಕುಳಿತಿದ್ದ ಕಾರಿನ ಸಮೇತ  ನದಿಗೆ ತಳ್ಳಲಾಗಿದೆ. ನಿನ್ನೊಂದಿಗೆ ಪ್ರಾಣ ಕಳೆದುಕೊಂಡ ಇತರರ ಕುಟುಂಬದವರೊಂದಿಗೆ ನಾನು ಸಹ ಮರುಗುತ್ತೇನೆ. ನೀನು ನೀಚನಾಗಿದ್ದರೂ ನಿನ್ನ ಕುಟುಂಬದವರನ್ನು ದೂಷಿಸಲು ನನಗೆ  ಸಾಧ್ಯವಾಗುತ್ತಿಲ್ಲ.

ನೀನು ಎಂಜಿನಿಯರೊ, ವೈದ್ಯನೋ, ಪುರಾತತ್ವಶಾಸ್ತ್ರಜ್ಞನೋ ಇಲ್ಲವೇ ಸಾಫ್ಟವೇರ್ ಉದ್ಯೋಗಿಯೋ ಆಗಬಹುದಿತ್ತು. ಆದರೆ ಸಮಾಜಘಾತುಕನಾದೆ. ಸಾಮಾಜಿಕ ಜಾಲತಾಣದಲ್ಲಿ ನಿನ್ನ  ಜನಪ್ರಿಯತೆಯನ್ನು ಬಳಸಿಕೊಂಡು ಯುವಕರನ್ನು ಉಗ್ರವಾದದತ್ತ ಸೆಳೆಯುತ್ತಾ ಅವರನ್ನು ದೇಶದ್ರೋಹಿಗಳಾಗಿ ಮಾಡುವ ಪ್ರಯತ್ನ ನಡೆಸಿದೆ. ನಿನ್ನ ಸಹೋದರರ ಜತೆ ರಾಂಬೊಗಳ  ರೀತಿಯಲ್ಲಿ ಬಂದೂಕು ಮತ್ತು ರೇಡಿಯೋಗಳನ್ನು ಹಿಡಿದಿರುವ ಫೋಟೊಗಳನ್ನು ಅಂತರ್ಜಾಲದಲ್ಲಿ ಹರಿಬಿಟ್ಟೆ. ಇದು ಹಾಲಿವುಡ್ ಚಿತ್ರಗಳಿಗೆ ಸೀಮಿತವಾಗಿದ್ದರೆ ಬಹಳ ಚೆನ್ನಾಗಿರುತಿತ್ತು. ನಿನ್ನ ಎಲ್ಲ  ಪ್ರಯತ್ನಗಳು ಕಾರ್ಯಾಚರಣೆಯ ಪ್ರದೇಶಕ್ಕೆ ಸೂಕ್ತವಾಗಿರಲಿಲ್ಲ. ಈ ವಿಷಯದಲ್ಲಿ ತಡವಾಗಿ ಸಲಹೆ ನೀಡುತ್ತಿದ್ದೇನೆ.

ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ಆರಂಭಿಸಿದ ದಿನದಂದೇ ನೀನು ಸತ್ತಿದ್ದೆ. ಭಾರತೀಯ ಸೈನಿಕರನ್ನು ಹತ್ಯೆಮಾಡುವಂತೆ ನೀನು  ಕಾಶ್ಮೀರದ ಯುವಕರನ್ನು ಪ್ರೇರೇಪಿಸಿದೆ. ನೀನು 22  ವರ್ಷದವನಾಗಿದ್ದಾಗ ಮೃತಪಟ್ಟಿದ್ದು, ಒಂದು ವೇಳೆ ಈ ಕಾರ್ಯಾಚರಣೆಯಲ್ಲಿ ನೀನು ತಪ್ಪಿಸಿಕೊಂಡಿದ್ದರೆ 23 ವರ್ಷಕ್ಕೆ ಸಾಯುತ್ತಿದ್ದೆ ಅಷ್ಟೇ... ಆಗಲೂ ಹಿಂಸಾಚಾರ ಹಾಗೂ ಅದರ ಪರಿಣಾಮ  ಇದೇ ರೀತಿ ಇರುತ್ತಿತ್ತು. ಬದಲಾಗುತ್ತಿದ್ದದ್ದು ಕೇವಲ ನಿನ್ನ ಸಾವಿನ ದಿನಾಂಕ ಮಾತ್ರ.

ಒಂದು ವೇಳೆ ನೀನು ಸಾಯುವ ಮುನ್ನ ನನ್ನನ್ನು ಭೇಟಿಯಾಗಿದ್ದರೆ, ನಿನಗೆ ಹುರಿಯತ್ ಕಾಂಗ್ರೆಸ್ ನ ನಿಜವಾದ ಮುಖ ತೋರಿಸುತ್ತಿದ್ದೆ. ಹುರಿಯತ್ ಕಾನ್ಫೆರೆನ್ಸ್ ನ ನಾಯಕರು ಜಿಗಣೆಯಂತವರು.  ಕಾಶ್ಮೀರದ ಯುವಕರಿಗೆ ಮನುಷ್ಯರ ರಕ್ತದ ರುಚಿ ತೋರಿಸಿ ಭಾರತೀಯ ಸೈನ್ಯದ ವಿರುದ್ಧ ದಾಳಿ ಮಾಡಲು ಕಳುಹಿಸುತ್ತಿದ್ದಾರೆ. ಅದೂ ಸಿಂಹಗಳ ವಿರುದ್ಧ ಕುರಿಗಳನ್ನು ಯುದ್ಧಕ್ಕೆ ಕಳುಹಿಸುವಂತೆ.  ಇದು ಯಾವ ರೀತಿಯ ಯುದ್ಧವಾಗುತ್ತದೆ?

ಹುರಿಯತ್ ಕಾನ್ಫೆರೆನ್ಸ್ ನಾಯಕರ ಮಕ್ಕಳು ವಿದೇಶದಲ್ಲಿ ವೈಭವಯುತ ಹಾಗೂ ನೆಮ್ಮದಿಯ ಜೀವನ ನಡೆಸುತ್ತಿದ್ದರೆ, ನಿನ್ನಂತಹ ಕಾಶ್ಮೀರದ ಯುವಕರು ಜಿಹಾದ್ ಹೆಸರಲ್ಲಿ ತಪ್ಪುದಾರಿ  ಹಿಡಿಯುತ್ತಿದ್ದಾರೆ. ಭಾರತ ಆಕ್ರಮಿತ ಕಾಶ್ಮೀರಕ್ಕಾಗಿ ಹೋರಾಟ ಮಾಡುತ್ತಿರುವ ಹುರಿಯತ್ ಕಾನ್ಫೆರೆನ್ಸ್ ಮುಖ್ಯಸ್ಥ ಸೈಯದ್ ಅಲಿ ಗಿಲಾನಿಯ ಒಬ್ಬ ಸಂಬಂಧಿ ಹೆಸರು ಹೇಳು ನೋಡೋಣ.  ಗಿಲಾನಿಯ ಮೊದಲ ಮಗ ನಯೀಮ್ ಗಿಲಾನಿ ರಾವಲ್ಪಿಂಡಿಯಲ್ಲಿ ಡಾಕ್ಟರ್ ಆಗಿದ್ದು, ಪಾಕಿಸ್ತಾನದ ಐಎಸ್ಐನ ಆಶ್ರಯದಲ್ಲಿದ್ದಾನೆ. ಎರಡನೇ ಮಗ ಜಹೂರ್, ದಕ್ಷಿಣ ದೆಹಲಿಯಲ್ಲಿ  ವಾಸವಾಗಿದ್ದಾನೆ. ಮತ್ತೊಬ್ಬ ನಾಯಕ ಮಿರ್ವೈಸ್ ಉಮರ್ ಫಾರೂಕ್ ಸಹೋದರಿ ರಾಬಿಯಾ ಅಮೆರಿಕದಲ್ಲಿ ಡಾಕ್ಟರ್… ಇನ್ನು ಮರಿಯಮ್ ಅಂದ್ರಾಬಿಯ ಸಹೋದರಿ ಅಸಿಯಾ ಅಂದ್ರಾಬಿ  ತನ್ನ ಕುಟುಂಬದ ಜತೆ ಮಲೇಷ್ಯಾದಲ್ಲಿ ವಾಸವಾಗಿದ್ದಾನೆ… ಹೀಗೆ, ಕಾಶ್ಮೀರ ಪ್ರತ್ಯೇಕವಾದಿ ಮುಖಂಡರ ಮಕ್ಕಳು ಮತ್ತು ಸಂಬಂಧಿಕರು ಶ್ರೀಮಂತರಾಗಿ ಸುಖವಾಗಿದ್ದಾರೆ. ಆದ್ರೆ, ಕಾಶ್ಮೀರದ  ಮಕ್ಕಳು ತಲೆಗೆ ಗುಂಡೇಟು ತಿಂದು ಸಾಯುತ್ತಿದ್ದಾರೆ. ಜಿಹಾದ್ ಕೇವಲ ಅನ್ಯರ ಮಕ್ಕಳಿಗಾಗಿ ಅಷ್ಟೇ.. ತಮ್ಮ ಮಕ್ಕಳ ಪಾಲಿಗೆ ಅಲ್ಲ..

 7.62 ಮಿಲಿಮೀಟರ್ ಲೋಹದ ಕವಚ ನಿನ್ನ ಹಣೆಯನ್ನು ರಂಧ್ರ ಮಾಡುವ ಮೂಲಕ ನಿನ್ನ ಪೋಷಕರ ಮಗ ಸತ್ತಿದ್ದಾನೆ. ಈಗ ಭದ್ರತಾ ಪಡೆಗಳನ್ನು ದೂಷಿಸುತ್ತಾ, ನಿರಂತರವಾಗಿ ದಾಳಿಗಳನ್ನು  ಮಾಡುತ್ತಿರುವ ಯಾವುದೇ ಕಾಶ್ಮೀರಿ ಯುವಕರು ಎಂದಿಗೂ ಹುರಿಯತ್ ನಾಯಕರನ್ನು ಬುರ್ಹಾನ್ ವಾನಿ ನಿಮ್ಮ ಕುಟುಂಬದಿಂದ ಏಕೆ ಬಂದಿಲ್ಲ ಎಂದು ಸೈಯದ್ ಅಲಿ ಗಿಲಾನಿಯನ್ನು  ಪ್ರಶ್ನಿಸುವುದಿಲ್ಲ.

ಕಾಶ್ಮೀರ ಜನರು ಈದ್ ಹಬ್ಬವನ್ನು ಪಾಕಿಸ್ತಾನದವರೊಂದಿಗೆ ಆಚರಿಸಿದರೆ ಪಾಕ್ ಮಾಧ್ಯಮಗಳು ಇಷ್ಟಪಡುತ್ತವೆ. ಆದ್ರೆ ಭಾರತದವರೊಂದಿಗೆ ಆಚರಿಸಿದರೆ ಸಹಿಸುವುದಿಲ್ಲ. ಇದು ಭಾರತದ  ಒಗ್ಗಟ್ಟಿಗೆ ಪೆಟ್ಟು ನೀಡುತ್ತಿದೆ. 1400 ವರ್ಷಗಳ ಇಸ್ಲಾಂ ಇತಿಹಾಸದಲ್ಲಿ ಚಂದ್ರನನ್ನು ನೋಡದೇ ಕೇವಲ ಪಾಕಿಸ್ತಾನದ ದಿಕ್ಕನ್ನು ನೋಡುತ್ತಾ ಈದ್ ಹಬ್ಬವನ್ನು ಆಚರಿಸುತ್ತಿರುವುದು ಇದೇ  ಮೊದಲು... ಭಲೇ! ಭೇಷ್...

ಹುರಿಯತ್ ನಾಯಕರಿಗೆ ಕಾಶ್ಮೀರದ ಏಳಿಗೆ ಬೇಕಿಲ್ಲ. ಆ ಬಗ್ಗೆ ಅವರು ಚಿಂತಿಸುವುದೂ ಇಲ್ಲ. ಇನ್ನು ಪ್ರಸ್ತತ ಹರಿಯುತ್ತಿರುವ ರಕ್ತದೋಕುಳಿ ಅವರ ಒಂದು ಉದ್ಯಮವಷ್ಟೇ...ಈ ರಕ್ತದೊಕುಳಿ  ಮೂಲಕ ತಮ್ಮ ಲಾಭದ ಹಾದಿಯನ್ನು ಹುರಿಯತ್ ನಾಯಕರು ಕಂಡುಕೊಳ್ಳುತ್ತಿದ್ದಾರೆ. ಇದು ಸುಳ್ಳು ಎಂದು ವಾದಿಸುವುದಾದರೆ, ಹುರಿಯತ್ ನಾಯಕರ ಕುಟುಂಬದಿಂದ ಬಂದ ಹೋರಾಟಗಾರರ  ಹೆಸರು ಹೇಳು ಸಾಕು.

ಕಾಶ್ಮೀರದಲ್ಲಿ ಪ್ರೇರಿತ ಸಂಘರ್ಷ ಸೃಷ್ಟಿಯಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಈ ಬಗ್ಗೆ ಯಾರು ತಲೆಕೆಡಿಸಿಕೊಳ್ಳುವುದಿಲ್ಲ…ಭಾರತೀಯ ಸೇನೆಯನ್ನು ಕಣಿವೆ ರಾಜ್ಯದಲ್ಲಿ  ನಿಯಂತ್ರಿಸಲು ಕಾಶ್ಮೀರ ವಿವಾದ ಪಾಕಿಸ್ತಾನಕ್ಕೆ ಸುಲಭ ಮಾರ್ಗ… ಎಂಬ ಅಂಶಗಳು ಹುರಿಯತ್ ನಾಯಕರಿಗೆ ಸ್ಪಷ್ಟವಾಗಿ ಗೊತ್ತಿದೆ. ಅದೇ ಕಾರಣಕ್ಕೆ ನಿಮ್ಮನ್ನು ತಮ್ಮ ಲಾಭಕ್ಕೆ  ಬಳಸಿಕೊಳ್ಳುತ್ತಿದ್ದಾರೆ.

ನೀನೊಬ್ಬ ಉಗ್ರ. ಭಾರತದ ವಿರುದ್ಧ ಯುದ್ಧ ಮಾಡುವ ಹಾದಿಯನ್ನು ಆಯ್ಕೆ ಮಾಡಿಕೊಂಡೆ. ಈ ಹಿಂದೆ ಬಂದ ಅನೇಕ ಉಗ್ರರಂತೆ ನೀನು ಸಹ ಇದರಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ.  ಭಾರತೀಯ ಸೇನೆ ವಿರುದ್ಧ ಯುದ್ದ ಆರಂಭಿಸುವ ಮುನ್ನ, ಭಾರತೀಯ ಸೇನೆಯಿಂದ ನೀವು ತಪ್ಪಿಸಿಕೊಳ್ಳಲಾಗುವುದಿಲ್ಲ ಎಂಬ ಸತ್ಯವನ್ನು ನೀವು ಅರಿತುಕೊಳ್ಳಬೇಕು.

ನಿನ್ನ ಅನುಯಾಯಿಗಳಿಗೂ ರಕ್ತದ ದಾಹವಿದೆ. ಹೀಗಿರುವಾಗ ಕಣಿವೆ ರಾಜ್ಯದಲ್ಲಿ ನಿನ್ನಂತವರ ರಕ್ತ ಮತ್ತಷ್ಟು ಹರಿಯಲಿ ಬಿಡು…’

ಚೀರ್ಸ್..!
ಮೇಜರ್ ಗೌರವ್ ಆರ್ಯ..

SCROLL FOR NEXT