ಪ್ರಧಾನ ಸುದ್ದಿ

ಭಾರತದ ಮೊದಲ ಬುಲೆಟ್ ರೈಲು ಯೋಜನೆಗೆ ಪ್ರಾರಂಭದಲ್ಲೇ ವಿಘ್ನ!

Srinivas Rao BV

ಮುಂಬೈ: ಭಾರತದ ಮೊಲದ ಬುಲೆಟ್ ರೈಲು ಯೋಜನೆಗೆ ಪ್ರಾರಂಭದಲ್ಲೇ ವಿಘ್ನ ಎದುರಾಗಿದೆ. ಮುಂಬೈ-ಅಹಮದಾಬಾದ್ ನದುವಿನ ಬುಲೆಟ್ ರೈಲು ಮಾರ್ಗ ನಿರ್ಮಾಣಕ್ಕಾಗಿ ಗುರುತಿಸಲಾಗಿರುವ ಪ್ರಮುಖ ಜಾಗವನ್ನು ನೀಡಲು ಮಹಾರಾಷ್ಟ್ರ ಸರ್ಕಾರ ತಕರಾರು ತೆಗೆದಿರುವುದೇ ಇದಕ್ಕೆ ಕಾರಣವಾಗಿದೆ. ಆಂಗ್ಲ ಪತ್ರಿಕೆಯೊಂದರ ವರದಿಯ ಪ್ರಕಾರ ಬುಲೆಟ್ ರೈಲು ಮಾರ್ಗದ ಪ್ರಮುಖ ನಿಲ್ದಾಣದ ನಿರ್ಮಾಣಕ್ಕಾಗಿ ಮುಂಬೈ ನ ಬಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಬಳಿ ಜಾಗವನ್ನು ಗುರುತಿಸಲಾಗಿತ್ತು. ಆದರೆ ಈ ಪ್ರದೇಶದಲ್ಲಿ ಹಣಕಾಸು ಕೇಂದ್ರವನ್ನು ನಿರ್ಮಿಸುವ ಪ್ರಸ್ತಾವನೆ ಹೊಂದಲಾಗಿರುವುದರಿಂದ ಬಂದ್ರಾ- ಕುರ್ಲಾ ಬಳಿ ಗುರುತಿಸಲಾಗಿರುವ ಪ್ರದೇಶವನ್ನು ಬುಲೆಟ್ ರೈಲು ನಿಲ್ದಾಣ ನಿರ್ಮಾಣಕ್ಕೆ ನೀಡಲು ಸಾಧ್ಯವಿಲ್ಲ ಎಂದು ರೈಲ್ವೆ ಇಲಾಖೆಗೆ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

ಬುಲೆಟ್ ರೈಲು ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಜಪಾನ್ ನ ತಂಡ ಸಾಕಷ್ಟು ಸಂಶೋಧನೆ ನಡೆಸಿ ಬಿಕೆಸಿ ಬಳಿಯ ಪ್ರದೇಶವನ್ನು ಗುರುತಿಸಿತ್ತು. ಬುಲೆಟ್ ರೈಲು ನಿಲ್ದಾಣ ಸುರಂಗ ಮಾರ್ಗದಲ್ಲಿ ನಿರ್ಮಾಣವಾಗಲಿದೆ ಎಂದು ತಿಳಿದಿದ್ದರೂ ಮಹಾರಾಷ್ಟ್ರ ಸರ್ಕಾರ ನಿಲ್ದಾಣ ನಿರ್ಮಾಣಕ್ಕೆ ಜಾಗ ನೀಡಲು ನಿರಾಕರಿಸುತ್ತಿದೆ ಎಂಬ ವರದಿ ಪ್ರಕಟವಾಗಿದೆ.

ಬಿಕೆಸಿ ಬಳಿ ಬುಲೆಟ್ ರೈಲು ನಿಲ್ದಾಣ ನಿರ್ಮಾಣವಾಗುವುದರಿಂದ ಸುಮಾರು 10 ,000 ಸಾವಿರ ಕೋಟಿ ನಷ್ಟವಾಗಲಿದೆ ಎಂದು ಮಹಾರಾಷ್ಟ್ರ ಸರ್ಕಾರ ಅಂದಾಜಿಸಿದೆ. ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ರೈಲ್ವೆ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಆದರೂ ಯಾವುದೇ ಉಪಯೋಗವಾಗಿಲ್ಲ ಎಂದು ತಿಳಿದುಬಂದಿದೆ.

SCROLL FOR NEXT