ನವದೆಹಲಿ: ಸದಾ ಕಾವೇರಿ ವಿಷಯದಲ್ಲಿ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಈ ಬಾರಿ ರಾಜ್ಯದ ಮೇಕೆದಾಟು ಯೋಜನೆಗೂ ವಿರೋಧ ವ್ಯಕ್ತಪಡಿಸಿದ್ದು, ಕರ್ನಾಟಕದ ಯೋಜನೆಗೆ ಅನುಮತಿ ನೀಡದಂತೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಸತತ ಎರಡನೇ ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಇಂದು ಪ್ರಧಾನಿಯನ್ನು ಭೇಟಿ ಮಾಡಿದ ಜಯಾ, ಕಾವೇರಿ ನಿರ್ವಹಣಾ ಮಂಡಳಿ ರಚನೆ, ಕೊಚ್ಚಿ-ಬೆಂಗಳೂರು ಗ್ಯಾಸ್ ಪೈಪ್ ಲೈನ್ ಮಾರ್ಗ ಬದಲಾವಣೆ ಹಾಗೂ ತಮಿಳು ಭಾಷೆಗೆ ರಾಷ್ಟ್ರೀಯ ಮಾನ್ಯತೆ ಸೇರಿದಂತೆ ಒಟ್ಟು 29 ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದರು.
ಇದೇ ವೇಳೆ ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್ಟಿ) ಮಸೂದೆಗೆ ತಮ್ಮ ಪಕ್ಷವು ಸೂಚಿಸಿರುವ ತಿದ್ದುಪಡಿಗಳನ್ನು ಅಂಗೀಕರಿಸಬೇಕು ಎಂದು ಜಯಾ ಪ್ರಧಾನಿಗೆ ಮನವಿ ಮಾಡಿದರು.
ದೇಶದ ಎಲ್ಲ ರಾಜ್ಯಗಳು ಏಕರೂಪ ಜಿಎಸ್ಟಿ ಮಸೂದೆಗೆ ಬೆಂಬಲ ವ್ಯಕ್ತ ಪಡಿಸಿದ್ದರೂ, ತಮಿಳುನಾಡು ಮಾತ್ರ ಕೆಲ ವಿಷಯಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ.
ಮೇಕೆದಾಟು ಬಳಿ ಕರ್ನಾಟಕ ನಿರ್ಮಿಸಲು ಹೊರಟಿರುವ ಅಣೆಕಟ್ಚಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು, ಕಾವೇರಿಕೊಳ್ಳದಲ್ಲಿ ಕಾಮಗಾರಿ ಕೈಗೊಂಡು ಕರ್ನಾಟಕ ಕಾವೇರಿ ಐ ತೀರ್ಪನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಆದರೆ ತಮಿಳುನಾಡಿಗೆ ಹರಿಯುವ ನೀರಿನಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಕರ್ನಾಟಕ ಸ್ಪಷ್ಟನೆ ನೀಡಿದೆ.
ಕರ್ನಾಟಕವಿನ್ನೂ ಯೋಜನೆ ಪ್ರಸ್ತಾವನೆ ಮುಂದಿಟ್ಟಿದ್ದು, ಯೋಜನಾ ವರದಿ ತಯಾರಿಸಿ ಕೇಂದ್ರ ಜಲಮಂಡಳಿ ಯೋಜನಾ ಸಮಿತಿಗೆ ಕಳುಹಿಸಿಕೊಟ್ಟು, ಅಲ್ಲಿ ಒಪ್ಪಿಗೆ ಸಿಕ್ಕ ನಂತರ ಯೋಜನೆ ಆರಂಭವಾಗಲಿದೆ.